ಇಂದೋರ್(ಮಧ್ಯ ಪ್ರದೇಶ): ರಾಹುಲ್ ಗಾಂಧಿ ಎಂದಾಕ್ಷಣ ತಕ್ಷಣ ನೆನಪಾಗುವುದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ. ರಾಹುಲ್ ಗಾಂಧಿ ಹೆಸರಿಗೆ ದೇಶದಲ್ಲಿ ಒಂದು ಘನೆತೆ ಇದ್ದೇ ಇದೆ. ಆದ್ರೆ ಇಲ್ಲೋರ್ವ ವ್ಯಾಪಾರಿಗೆ ರಾಹುಲ್ ಗಾಂಧಿ ಅನ್ನೋ ಹೆಸರೇ ಮುಳುವಾಗಿದೆಯಂತೆ.
ಹೌದು, ಇಂದೋರ್ನ ಸಾಮಾನ್ಯ ಬಟ್ಟೆ ವ್ಯಾಪಾರಿ ರಾಹುಲ್ ಗಾಂಧಿಯೇ ತನ್ನ ಹೆಸರಿನಿಂದಾಗಿ ಪಡಬಾರದ ಕಷ್ಟ ಪಡುತ್ತಿರುವ ವ್ಯಕ್ತಿ. ಅಷ್ಟಕ್ಕೂ ಆತನಿಗೆ ಈ ಹೆಸರಿನ ಸಮಸ್ಯೆ ಕಾಡಲು ಮುಖ್ಯ ಕಾರಣ, ಆತನ ಹೆಸರು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೆಸರು ಒಂದೇ ತರನಾಗಿರುವುದಂತೆ.
ರಾಹುಲ್ ಗಾಂಧಿಗೆ ಹುಟ್ಟಿದಾಗ ರಾಹುಲ್ ಮಾಳವಿಯ ಅಂತ ಹೆಸರಿಡಲಾಗಿತ್ತು. ಆತನ ತಂದೆ ಬಿಎಸ್ಎಫ್ನ ಮಾಜಿ ಯೋಧ. ರಾಹುಲ್ ತಂದೆ ಸೈನ್ಯದಲ್ಲಿ ಕೆಲಸ ಮಾಡುತ್ತಿರುವಾಗ ಅವರ ಕರ್ತವ್ಯನಿಷ್ಠೆ ಗಮನಿಸಿದ ಅಧಿಕಾರಿಗಳು "ಗಾಂಧಿ" ಎಂದು ಕರೆಯಲು ಪ್ರಾರಂಭಿಸುತ್ತಾರೆ. ತನ್ನ ಕರ್ತವ್ಯ ಮೆಚ್ಚಿ ಅಧಿಕಾರಿಗಳು ಪ್ರೀತಿಯಿಂದ ನೀಡಿದ ಹೆಸರನ್ನು ಅವರು ಎಲ್ಲಾ ಕಡೆ ಬಳಸಲು ಪ್ರಾರಂಭಿಸುತ್ತಾರೆ. ಮಾಳವೀಯ ಬದಲಿಗೆ ತಮ್ಮ ಹೆಸರಿನ ಮುಂದೆ ಗಾಂಧಿ ಎಂದು ಹಾಕಿಕೊಳ್ಳುತ್ತಾರೆ. ತನ್ನ ಹೆಸರಿನಂತೆ ತನ್ನ ಮಗ ರಾಹುಲ್ ಹೆಸರನ್ನೂ ಅವರು ರಾಹುಲ್ ಗಾಂಧಿ ಎಂದು ಬದಲಾಯಿಸುತ್ತಾರೆ.
ಯಾವಾಗ ರಾಹುಲ್ ಮಾಳವೀಯನ ಹೆಸರು ರಾಹುಲ್ ಗಾಂಧಿ ಎಂದು ಬದಲಾಯಿತೋ, ಆಗಿನಿಂದ ರಾಹುಲ್ ಗೆ ಸಮಸ್ಯೆಗಳು ಕಾಡತೊಡಗಿವೆ. ರಾಹುಲ್ ಗಾಂಧಿ ಎಷ್ಟರ ಮಟ್ಟಿಗೆ ಸಮಸ್ಯೆ ಅನುಭವಿಸುತ್ತಿದ್ದಾನೆ ಅಂದ್ರೆ, ಆತ ಯಾರಿಗಾದರು ಕರೆ ಮಾಡಿ ನಾನು ರಾಹುಲ್ ಗಾಂಧಿ ಎಂದು ಹೇಳಿದರೆ ಜನರು ನಂಬುತ್ತಿಲ್ಲವಂತೆ. ನೀನು ನಕಲಿ ರಾಹುಲ್ ಗಾಂಧಿ ಎನ್ನುತ್ತಾರಂತೆ.
ಅಷ್ಟಕ್ಕೆ ಮುಗಿಯದೆ ಆತ ಬ್ಯಾಂಕಿಗೆ ಹೋದ್ರೆ ಅಲ್ಲಿ ಸಾಲ ಸಿಗುತ್ತಿಲ್ಲ, ವಾಹನ ಓಡಿಸೋಣ ಅಂದ್ರೆ ಡ್ರೈವಿಂಗ್ ಲೈಸನ್ಸ್ ಸಿಗುತ್ತಿಲ್ಲ. ಅದೂ ಅಲ್ಲದೆ ಮೊಬೈಲ್ ಬಳಸೋಣ ಅಂದ್ರೆ ಆತನಿಗೆ ಯಾರೂ ಸಿಮ್ ಸಹ ಕೊಡಲು ತಯಾರಿಲ್ಲವಂತೆ. ಇಷ್ಟೆಲ್ಲ ಸಮಸ್ಯೆಗಳಿಂದ ಬೇಸತ್ತಿರುವ ಇಂದೋರ್ನ ರಾಹುಲ್ ಗಾಂಧಿ ತನ್ನ ಹೆಸರಿನಲ್ಲಿರುವ 'ಗಾಂಧಿ' ಅನ್ನೋ ಸರ್ ನೇಮ್ ತೆಗೆದುಹಾಕಲು ನಿರ್ಧರಿಸಿದ್ದಾನೆ.