ನವದೆಹಲಿ: ಉಗ್ರವಾದ ಹರಡುತ್ತಿರುವ ಕೆಲ ಇಸ್ಲಾಮಿಕ್ ಸಂಘಟನೆಗಳು ಭಾರತದ ಹಲವು ನಗರಗಳಲ್ಲಿ ಬೇರೂರಲು ಯತ್ನಿಸುತ್ತಿವೆ ಎಂದು ಗುಪ್ತಚರ ದಳ ಎಚ್ಚರಿಸಿದೆ.
ಕೇಂದ್ರ ಗೃಹ ಇಲಾಖೆಗೆ ಈ ಬಗ್ಗೆ ವರದಿ ಸಲ್ಲಿಸಿರುವ ಗುಪ್ತಚರ ದಳ, ದೇಶದಲ್ಲಿ ಉಗ್ರವಾದ ಪಸರಿಸಲು ಈ ಸಂಘಟನೆಗಳು ಮುಂದಾಗಿವೆ. ಕೇರಳದಲ್ಲಿ ನೆಲೆ ಕಂಡಿರುವ ಇಂತಹ ಗುಂಪುಗಳು ಇಂಡೋ-ನೇಪಾಳದ ಗಡಿಯಲ್ಲಿನ ಯುವಕರನ್ನು ಸೆಳೆಯುವ ಯತ್ನ ನಡೆಸುತ್ತಿವೆ. ಅಸ್ಸೋಂನಂತಹ ರಾಜ್ಯಗಳಲ್ಲಿ ಬಾಂಗ್ಲಾದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಇಂತಹ ಯತ್ನ ಮಾಡುತ್ತಿವೆ ಎಂದು ಹೇಳಿದೆ.
ಈ ಸಂಘಟನೆಗಳಿಗೆ ಗಲ್ಫ್ ದೇಶಗಳಿಂದ ವರಮಾನ ಬರುತ್ತಿದೆ. ಇದರಿಂದಲೇ ಹಲವು ಅಂತಾರಾಷ್ಟ್ರೀಯ ಮೂಲಭೂತವಾದಿ ಗುಂಪುಗಳು ಭಾರತದ ಪ್ರಮುಖ ನಗರಗಳತ್ತ ಕಣ್ಣು ನೆಟ್ಟಿವೆ. ಜರ್ಮನಿ, ರಷ್ಯಾ, ಚೀನಾ ಹಾಗೂ ಟರ್ಕಿಯಲ್ಲಿ ಬ್ಯಾನ್ ಆದ ಈ ಸಂಘಟನೆಗಳು ಇಲ್ಲಿ ನೆಲೆ ಕಾಣಲು ಬಯಸುತ್ತಿವೆ. ತಮಿಳುನಾಡಿನಲ್ಲಿಯೂ ಈ ಗುಂಪುಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಎಲ್ಲೆಲ್ಲಿ ಈ ಗುಂಪುಗಳಿವೆ, ಇವುಗಳ ನಾಯಕರು ಯಾರು ಎಂಬ ಬಗ್ಗೆ ವಿಸ್ತೃತ ವರದಿ ನೀಡುವಂತೆ ಗೃಹ ಇಲಾಖೆ ಗುಪ್ತಚರ ಇಲಾಖೆಗೆ ಸೂಚಿಸಿದೆ. ಇಂತಹ ಗುಂಪುಗಳೇ ಶ್ರೀಲಂಕಾ ಯುವಕರಲ್ಲಿ ಮೂಲಭೂತವಾದ ಹರಡಿ ಸರಣಿ ಸ್ಫೋಟಕ್ಕೆ ಕಾರಣವಾದವು ಎನ್ನಲಾಗಿದೆ.