ಚಂಡೀಗಡ: ಕೃಷಿ ಮಸೂದೆಗಳ ಕುರಿತು ಮಾತನಾಡಲು ಕೇಂದ್ರದ ಆಹ್ವಾನವನ್ನು ನಿರಾಕರಿಸಿರುವ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ, ಈ ವಿಷಯದ ಬಗ್ಗೆ ಸರ್ಕಾರವು 'ಗಂಭೀರವಾಗಿಲ್ಲ'. ಹೀಗಾಗಿ ಕೃಷಿ ಕಾನೂನುಗಳಿಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಚರ್ಚಿಸಲು ಇಚ್ಚಿಸುವುದಿಲ್ಲ ಎಂದು ತಿಳಿಸಿದೆ.
"ನಾವು ನಿನ್ನೆ ಕೇಂದ್ರ ಕೃಷಿ ಸಚಿವರಿಂದ ದೂರವಾಣಿ ಕರೆ ಸ್ವೀಕರಿಸಿದ್ದೇವೆ. ಜೊತೆಗೆ, ಅಕ್ಟೋಬರ್ 8 ರಂದು ದೆಹಲಿಗೆ ಬರಲು ಅವರು ನಮಗೆ ಇಮೇಲ್ ಕೂಡ ಕಳುಹಿಸಿದ್ದಾರೆ. ಆದರೆ, ಕೃಷಿ ಕಾಯ್ದೆ ತಿದ್ದುಪಡಿ ವಿಚಾರವಾಗಿ ಸರ್ಕಾರ ಗಂಭೀರವಾಗಿಲ್ಲದ ಕಾರಣ ನಾವು ಯಾವುದೇ ಸಭೆಯಲ್ಲಿ ಭಾಗವಹಿಸುವುದಿಲ್ಲ" ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸದಸ್ಯ ಸರ್ವನ್ ಸಿಂಗ್ ಪಾಂಡರ್ ಹೇಳಿದರು.
"ಇಡೀ ಕೃಷಿ ಕ್ಷೇತ್ರದಲ್ಲಿ ಅಂಬಾನಿ, ಅದಾನಿಯಂತಹ ದೊಡ್ಡ ಕಾರ್ಪೋರೇಟ್‌ಗಳು ಪ್ರಾಬಲ್ಯ ಸಾಧಿಸಲಿದ್ದಾರೆ. ಸರ್ಕಾರ ನಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಎಲ್ಲಾ ಕೃಷಿ ಮಸೂದೆಗಳು ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರವಾಗಿವೆ" ಎಂದು ಪಾಂಡರ್ ಹೇಳಿದರು.
"ಹರಿಯಾಣ ರೈತರು ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಅಷ್ಟೇ ಅಲ್ಲ, ಪೊಲೀಸ್ ಸಿಬ್ಬಂದಿ ಅಶ್ರುವಾಯು ಸಿಡಿಸಿದರು. ನಮ್ಮ ಸಂಘಟನೆ ಇದನ್ನು ಸಂಪೂರ್ಣವಾಗಿ ಖಂಡಿಸುತ್ತದೆ. ಇದೆಲ್ಲವನ್ನೂ ಬಿಜೆಪಿ ಸರ್ಕಾರದ ಆದೇಶದ ಮೇರೆಗೆ ಮಾಡಲಾಗುತ್ತದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಂಜಾಬ್‌ನಲ್ಲಿ ಮೂರು ದಿನಗಳ ಟ್ರಾಕ್ಟರ್ ಜಾಥಾ ನಡೆಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.