ಪಟಿಯಾಲ: ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳೊಂದಿಗೆ ರಾಜ್ಯದ ಮೊದಲ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಉದ್ಘಾಟಿಸಿದ್ದಾರೆ.
ಪಟಿಯಾಲ ನಗರಕ್ಕೆ ಮೇಲ್ಮೈ ನೀರು ಆಧಾರಿತ ನೀರು ಸರಬರಾಜು ಯೋಜನೆ (503 ಕೋಟಿ ರೂ.), ಕಿಲಾ ಮುಬಾರಕ್ ಬಳಿಯ ಪಾರಂಪರಿಕ ಬೀದಿಯ ಅಭಿವೃದ್ಧಿ (43 ಕೋಟಿ ರೂ.), ಹೊಸ ಬಸ್ ನಿಲ್ದಾಣ (65 ಕೋಟಿ ರೂ.) ಮತ್ತು ರಸ್ತೆ ಅಗಲೀಕರಣ ಸೇರಿದಂತೆ ಈ ಯೋಜನೆಗೂ ನಾಂದಿ ಹಾಡಿದ್ದಾರೆ.
ಪಟಿಯಾಲ ಜನರಿಗೆ ದಸರಾ ಶುಭಾಶಯಗಳನ್ನು ತಿಳಿಸಿದ ಅವರು, ನವೆಂಬರ್-ಡಿಸೆಂಬರ್ನಲ್ಲಿ ಕೊರೊನಾ ವೈರಸ್ ಕುರಿತು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮನವಿಯನ್ನು ಮಾಡಿದರು.
ಮಹಾರಾಜ ಭೂಪಿಂದರ್ ಸಿಂಗ್ ಕ್ರೀಡಾ ವಿಶ್ವವಿದ್ಯಾಲಯವನ್ನು 500 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ಅದರಲ್ಲಿ 60 ಕೋಟಿ ರೂ.ಗಳನ್ನು ಆರಂಭಿಕ ಹಂತದಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಬ್ಲಾಕ್ ಹಾಗೂ ಹಾಸ್ಟೆಲ್‌ಗಳ ಅಭಿವೃದ್ಧಿಗೆ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ತಮ್ಮ ಅಜ್ಜ ಮಹಾರಾಜ ಭೂಪಿಂದರ್ ಸಿಂಗ್ ಅವರ ಕೊಡುಗೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, ಅವರ ಸ್ಮರಣಾರ್ಥವಾಗಿ ವಿಶ್ವವಿದ್ಯಾಲಯಕ್ಕೆ ಹೆಸರಿಡಲಾಗಿದೆ ಎಂದ ಅವರು, ಅಜ್ಜನ 129 ನೇ ಜನ್ಮ ದಿನಾಚರಣೆ ದಸರಾದ ಈ ದಿನವೇ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಕ್ರೀಡಾಪಟುಗಳ ವೈಜ್ಞಾನಿಕ ಅಭಿವೃದ್ಧಿಗೆ ವಿಶ್ವವಿದ್ಯಾಲಯವು ಸಹಾಯ ಮಾಡುತ್ತದೆ. ಪಂಜಾಬ್ನ್ನು ಕ್ರೀಡಾ ಕೇಂದ್ರವಾಗಿ ಮತ್ತು ಅದರ ಕ್ರೀಡಾಪಟುಗಳು ಹಾಗೂ ತರಬೇತುದಾರರು ವೈಜ್ಞಾನಿಕ ಜ್ಞಾನವನ್ನು ಹೊಂದುವುದನ್ನು ನಾನು ನೋಡಲು ಬಯಸುತ್ತೇನೆ ಎಂದು ತಿಳಿಸಿದ ಅವರು, ಕ್ರೀಡಾ ವಿಶ್ವವಿದ್ಯಾಲಯಕ್ಕೆ ಭೂಮಿಯನ್ನು ಉಚಿತವಾಗಿ ನೀಡಿದ ಪಂಚಾಯತ್ ಮತ್ತು ಸಿಧುವಾಲ್ ಜನರಿಗೆ ಧನ್ಯವಾದ ಅರ್ಪಿಸಿದರು.
ಈ ಹಿಂದೆ ಕಾನೂನು ವಿಶ್ವವಿದ್ಯಾನಿಲಯಕ್ಕೆ ಭೂಮಿಯನ್ನು ದಾನ ಮಾಡಿದ್ದರು. ಈಗ ಅಭಿವೃದ್ಧಿ ಯೋಜನೆಗಾಗಿ ಮತ್ತೊಂದು ತುಂಡು ಭೂಮಿಯನ್ನು ಸಹ ನೀಡಿದ್ದಾರೆ ಎಂದ ಮುಖ್ಯಮಂತ್ರಿ, ಸಿಧುವಾಲ್ ಜನರಿಗೆ 50 ಲಕ್ಷ ರೂ.ಗಳ ಅನುದಾನವನ್ನು ಪ್ರಕಟಿಸಿದರು.