ಚಂಡೀಗಢ್: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಗೆ ಸಂಬಂಧಿಸಿದಂತೆ ಪಂಜಾಬ್ನ ಯುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬರೀಂದರ್ ಸಿಂಗ್ ಸಂಧು ಶನಿವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಸಂಧು, ಸಣ್ಣ ವ್ಯಾಪಾರಿಗಳು, ಕಾರ್ಮಿಕರು ಸೇರಿದಂತೆ ರೈತರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿರುವ ಕೃಷಿ ಮಸೂದೆಗಳನ್ನು ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ದೇಶದ ವಿವಿಧ ರೈತ ಸಂಘಟನೆಗಳು ಹೋರಾಟ ನಡೆಸಿವೆ.
ಈ ಮಸೂದೆ ವಿರೋಧಿಸಿ ದೇಶದ ಜನ ಬೀದಿಗಿಳಿರುವುದನ್ನು ನೋಡಿ ನಾನು ನನ್ನ ಯುವ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಾಗೂ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಬರೆದಿದ್ದಾರೆ. ಕೃಷಿ ಮಸೂದೆ ವಿರುದ್ಧ ಧ್ವನಿ ಎತ್ತಿದ್ದರೂ ಅದನ್ನು ಕಡೆಗಣಿಸಲಾಗಿದೆ ಎಂದು ಸಂಧು ಹೇಳಿದ್ದಾರೆ.
ಇದಕ್ಕೂ ಮೊದಲು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕೋರ್ ಕಮಿಟಿ ಸದಸ್ಯ ಮಾಲ್ವಿಂದರ್ ಕಾಂಗ್ ಮತ್ತು ರಾಜ್ಯ ಕಿಸಾನ್ ಮೋರ್ಚಾ ಮುಖ್ಯಸ್ಥ ತಾರ್ಲೋಚನ್ ಸಿಂಗ್ ಗಿಲ್ ಅವರು ಕೃಷಿ ಮಸೂದೆಗೆ ಸಂಬಂಧಿಸಿದಂತೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ತಿಂಗಳಲ್ಲೇ ಕೃಷಿ ಮಸೂದೆ ಜಾರಿಗೆ ತಂದಿದ್ದನ್ನು ವಿರೋಧಿಸಿ ರಾಜೀನಾಮೆ ಸಲ್ಲಿಸುತ್ತಿರುವುದು ಇವರು ಮೂರನೇ ವ್ಯಕ್ತಿಯಾಗಿದ್ದಾರೆ.