ಪುದುಚೆರಿ: ಇಲ್ಲಿನ ಚಾಕೊಲೆಟ್ ಹಾಗೂ ಚಾಕೊಲೇಟ್ ಸಿಹಿತಿಂಡಿಗಳ ಕೆಫೆಯೊಂದು 321 ಕೆಜಿ ತೂಕದ ಕೇಕ್ನಿಂದ ಪ್ರತಿಮೆ ನಿರ್ಮಾಣ ಮಾಡಿ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಗೌರವ ಸಲ್ಲಿಸಿದೆ.
ಅಭಿನಂದನ್ ಅವರ ಈ ಚಾಕೊಲೆಟ್ ಪ್ರತಿಮೆಯು 5.10 ಅಡಿ ಎತ್ತರವಿದ್ದು, 321 ಕೆಜಿ ತೂಕವಿದೆ. ಇದನ್ನು ತಯಾರಿಸಲು 132 ಗಂಟೆಗಳ ಕಾಲಾವಧಿ ತೆಗೆದುಕೊಂಡಿರುವುದಾಗಿ ಜುಕಾ ಕೆಫೆಯ ಮುಖ್ಯಸ್ಥ ರಾಜೇಂದ್ರ ತಂಗರಸು ತಿಳಿಸಿದ್ದಾರೆ.
ಫೆಬ್ರುವರಿ ತಿಂಗಳಲ್ಲಿ ಭಾರತ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಮುಂದಾಗಿದ್ದ ಪಾಕಿಸ್ತಾನದ ಎಫ್- 16 ಯುದ್ಧ ವಿಮಾನವನ್ನು ಅಭಿನಂದನ್ ವರ್ಧಮಾನ್, ಮಿಗ್-21 ಯುದ್ಧ ವಿಮಾನದ ಮೂಲಕ ಹಿಮ್ಮೆಟ್ಟಿಸಿದ್ದರು. ಘಟನೆ ವೇಳೆ ಅಭಿನಂದನ್, ಪಾಕ್ ನೆಲದಲ್ಲಿ ಏರ್ ಬ್ಯಾಗ್ನಿಂದ ಬಿದ್ದು, 60 ಗಂಟೆಗಳ ಕಾಲ ಶತ್ರು ರಾಷ್ಟ್ರದಲ್ಲಿದ್ದು ಭಾರತಕ್ಕೆ ಮರಳಿದ್ದರು. ಅವರ ಸಾಧನೆಗೆ ವೀರಚಕ್ರ ಪ್ರಶಸ್ತಿ, ಸೇನೆಯ ಸ್ಕ್ವಾಡ್ರನ್ ಯೂನಿಟ್ ಪ್ರಶಸ್ತಿ, ಏರ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ ಪ್ರಶಸ್ತಿಗಳು ಅರಸಿ ಬಂದಿದ್ದವು.
2009 ರಲ್ಲಿ ಸ್ಥಾಪನೆಯಾದ ಜುಕಾ (ZUKA) ಕೆಫೆಯು, ಪ್ರತಿ ವರ್ಷದ ಕೊನೆಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಗೌರವಾರ್ಥವಾಗಿ ಚಾಕೊಲೆಟ್ ಪ್ರತಿಮೆಗಳನ್ನು ನಿರ್ಮಿಸುತ್ತಾ ಬಂದಿದೆ. ಈ ಹಿಂದೆ ಮಹಾತ್ಮ ಗಾಂಧಿ, ಎಪಿಜೆ ಅಬ್ದುಲ್ ಕಲಾಂ, ಚಾರ್ಲಿ ಚಾಪ್ಲಿನ್, ರಜನಿಕಾಂತ್ ಹಾಗೂ ಎಂ.ಎಸ್. ಧೋನಿ ಇವರುಗಳ ಪ್ರತಿಮೆಗಳನ್ನು ತಯಾರಿಸಿ ಗೌರವ ಸಲ್ಲಿಸಿತ್ತು.