ಹೈದರಾಬಾದ್: ಪೂರ್ವ ಲಡಾಕ್ನಲ್ಲಿ ಸೋಮವಾರ ರಾತ್ರಿ ಭಾರತೀಯ ಸೈನಿಕರು ಹಾಗೂ ಚೀನಾ ಸೈನಿಕರ ಮಧ್ಯೆ ಘರ್ಷಣೆ ಸಂಭವಿಸಿದ್ದು ಹಿಂಸಾತ್ಮಕ ಸಂಘರ್ಷಣೆಯಲ್ಲಿ ತೆಲಂಗಾಣ ಮೂಲದ ಭಾರತೀಯ ಯೋಧನೋರ್ವ ಹುತಾತ್ಮರಾಗಿದ್ಧಾರೆ.
ಕರ್ನಲ್ ಸಂತೋಷ್ ಬಾಬು ಎಂಬ ಯೋಧ ಹುತಾತ್ಮರಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಬಾಬು ಮತ್ತು ಇಬ್ಬರು ಸೈನಿಕರು ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಹುತಾತ್ಮರಾಗಿದ್ದು ದೇಶಕ್ಕೆ ಸೇವೆ ಸಲ್ಲಿಸಿ ಹುತಾತ್ಮರಾದ ಮಗನ ಕಳೆದುಕೊಂಡ ಪೋಷಕರು ಕಣ್ಣೀರಿನ ಜೊತೆಗೆ ಕೆಚ್ಚೆದೆಯ ಮಾತುಗಳನ್ನು ಆಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹುತಾತ್ಮ ಯೋಧನ ತಂದೆ ಮತ್ತು ನಿವೃತ್ತ ಬ್ಯಾಂಕರ್ ಬಿ ಉಪೇಂದರ್, ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ಕೂಡಿಬರಲಿಲ್ಲ. ಹಾಗಾಗಿ ನನ್ನ ಮಗನನ್ನು ಸೇರಿಸಿದ್ದೆ. ಆದರೆ, ಆ ವೇಳೆ ನನ್ನ ಸಂಬಂಧಿಕರು ಈ ವಿಚಾರವನ್ನು ವಿರೋಧಿಸಿದ್ದರು. ನನ್ನ ಕನಸು ಈಡೇರಿಸುವ ಸಲುವಾಗಿ ನನ್ನ ಮಗನನ್ನು ದೇಶ ಸೇವೆಗೆ ಕಳುಹಿಸಿದ್ದೆ. ಅಂದುಕೊಂಡಂತೆ ಡಿಗ್ರಿ ಬಳಿಕ ಭಾರತೀಯ ಸೇನೆಗೆ ಮಗ ಆಯ್ಕೆಯಾದ. ಜಮ್ಮು ಮತ್ತು ಕಾಶ್ಮೀರದಲ್ಲಿ ಅವನ ಮೊದಲ ದೇಶಸೇವೆ ಆರಂಭವಾಯಿತು. ಇತ್ತೀಚೆಗೆ ಹೈದರಾಬಾದ್‍ಗೆ ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಎಂದು ದುಃಖ ತಂದುಕೊಂಡರು.
ಹುತಾತ್ಮ ಕರ್ನಲ್ ಸಂತೋಷ್ ಭಾನುವಾರ ತನ್ನ ತಾಯಿಯೊಂದಿಗೆ ಮಾತನಾಡಿದ್ದರು. ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಬಗ್ಗೆ ತಿಳಿಸಿದ್ದರು. ಅದರೆ, ಮಂಗಳವಾರ ಮಧ್ಯಾಹ್ನ ಮಗನ ಸುದ್ದಿ ಕೇಳಿ ಅವರ ಪೋಷಕರ ದುಃಖ ಹೇಳತೀರದಾಗಿತ್ತು.
ಸಂತೋಷ್ ನನಗೆ ಒಬ್ಬನೆ ಮಗ. ಸಾವಿನಿಂದ ನನಗೆ ದುಃಖ ಮತ್ತು ಹೆಮ್ಮೆ ಎರಡೂ ಆಗುತ್ತಿದೆ. ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿದ್ದಾನೆ ಅನ್ನೋದು ಒಂದೆಡೆಯಾದರೆ, ಓರ್ವ ತಾಯಿಯಾಗಿ ಮಗನನ್ನು ಕಳೆದುಕೊಂಡ ದುಃಖವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಹುತಾತ್ಮ ಯೋಧನ ತಾಯಿ ಮಂಜುಳಾ ಕಣ್ಣೀರು ಸುರಿಸುತ್ತಾ ಮಗನ ಸೇವೆಗೆ ಸೆಲ್ಯೂಟ್ ಹಾಕಿದರು.
ಹುತಾತ್ಮ ಬಾಬು 2004 ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ದುರಂತದ ಬಗ್ಗೆ ಕುಟುಂಬಕ್ಕೆ ಇಂದು ಮಧ್ಯಾಹ್ನ ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು ಬುಧವಾರ ಹುತಾತ್ಮ ಯೋಧನ ಪಾರ್ಥಿವ ಶರೀರ ಸೂರ್ಯಪೇಟೆಗೆ ಬರಲಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಆರ್. ಭಾಸ್ಕರನ್ ತಿಳಿಸಿದ್ದಾರೆ.
ಬಾಬು ಅವರ ನಿಧನದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಂತಾಪ ಸೂಚಿಸಿದ್ದಾರೆ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯವರಾದ ಬಾಬು ಬಿಹಾರ ರೆಜಿಮೆಂಟ್‌ನಲ್ಲಿ ಕಮಾಂಡಿಂಗ್ ಆಫೀಸರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ, ಮಗಳು ಮತ್ತು ಮಗ ದೆಹಲಿಯಲ್ಲೇ ಇದ್ದಾರೆ.