ಮುಜಾಫರಬಾದ್: ಪಾಕಿಸ್ತಾನದ ಸೇನೆ ಹಾಗೂ ಅಲ್ಲಿನ ಪೊಲೀಸರ ದೌರ್ಜನ್ಯದ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜನರು ತಿರುಗಿ ಬಿದ್ದಿದ್ದಾರೆ. ಅಲ್ಲಿನ ಸರ್ಕಾರದ ವಿರುದ್ಧ ಇದೀಗ ರಸ್ತೆಗೆ ಇಳಿದು ತೀವ್ರ ಹೋರಾಟ ನಡೆಸುತ್ತಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಭಾರತದ ಯೋಧರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ದಾಳಿ ನಡೆಸಿದ್ದರು. ಈ ವೇಳೆ ಉಗ್ರರ 7 ಕ್ಯಾಂಪ್ ಹೊಡೆದುರುಳಿಸಿದ್ದ ಭಾರತೀಯ ಸೇನೆ 50 ಉಗ್ರರನ್ನ ಹತ್ಯೆ ಮಾಡಿತ್ತು. ಇದೇ ವೇಳೆ ಪಾಕಿಸ್ತಾನದ 7 ಕಮಾಂಡೋ ಸಹ ಸಾವಿಗೀಡಾಗಿದ್ದರು.
ಇದೀಗ ಅಲ್ಲಿನ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಪಾಕ್ ಆಕ್ರಮಿತ ಕಾಶ್ಮೀರದ ಜನರು ತೀವ್ರ ಹೋರಾಟ ನಡೆಸುತ್ತಿದ್ದು, ರಸ್ತೆಗಿಳಿದಿದ್ದಾರೆ. ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಕಾರಣ ಇಬ್ಬರು ಸ್ಥಳೀಯರು ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಬಾದ್ನಲ್ಲಿ ಈ ಘಟನೆ ನಡೆಯುತ್ತಿದೆ.
ಇದರ ಮಧ್ಯೆ ಜಮ್ಮು-ಕಾಶ್ಮೀರದ ಅವಂತಿಪುರ್ದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ.