ಲಖನೌ(ಉತ್ತರ ಪ್ರದೇಶ) : ಕಳೆದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಹೊಣೆ ಹೊತ್ತಿದ್ದರು. ಇದೀಗ ಮುಂದಿನ ವಿಧಾನಸಭೆ ಹಾಗು ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅವರು ಲಖನೌನಲ್ಲಿ ಭದ್ರವಾಗಿ ನೆಲೆಯೂರಿ ರಾಜಕೀಯ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಇದಕ್ಕಾಗಿ ಜನವರಿಯಿಂದ ಕಾಂಗ್ರೆಸ್‌ನ ಹಿರಿಯ ನಾಯಕಿ ದಿ.ಶೀಲಾ ಕೌಲ್ ಅವರ ನಿವಾಸದ ನವೀಕರಣ ಕಾರ್ಯಗಳನ್ನು ಆರಂಭಿಸಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಈ ಕೆಲಸ ವಿಳಂಬವಾಗಿತ್ತು. ಕೋವಿಡ್-19 ತೀವ್ರತೆ ಕಡಿಮೆಯಾದ ತಕ್ಷಣ ಪ್ರಿಯಾಂಕಾ ವಾದ್ರಾ ಇದೇ ನಿವಾಸದಲ್ಲಿ ವಾಸ್ತವ್ಯ ಹೂಡುವ ನಿರೀಕ್ಷೆಯಿದೆ. ಈ ಮೂಲಕ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ನೆಲೆಯೂರಿ ಪ್ರಬಲ ಪೈಪೋಟಿಗಿಳಿಯಲು ಅವರು ನಿರ್ಧರಿಸಿದಂತೆ ಕಾಣುತ್ತಿದೆ.
ಪ್ರಿಯಾಂಕಾ ಈ ಹಿಂದೆ ಮೂರು ಬಾರಿ ಲಖನೌಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಇದೇ ಮನೆಯಲ್ಲಿ ತಂಗಿದ್ದರು. ಲೋಧಿ ಎಸ್ಟೇಟ್ನಲ್ಲಿರುವ ಅವರ ಬಂಗಲೆಯನ್ನು ಖಾಲಿ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಅವರಿಗೆ ನೋಟಿಸ್ ನೀಡಿತ್ತು. ಹೀಗಾಗಿ ತಮ್ಮ ರಾಜಕೀಯ ಶಿಬಿರವನ್ನು ಲಖನೌದಲ್ಲಿ ಸ್ಥಾಪಿಸಲು ಅವರು ಯೋಚಿಸಿದ್ದರು ಎಂದು ವಾದ್ರಾ ಆಪ್ತರೊಬ್ಬರು ತಿಳಿಸಿದ್ದಾರೆ.
ಪ್ರಿಯಾಂಕಾ ಲಖನೌಗೆ ತೆರಳಿ ರಾಜಕೀಯ ಕಾರ್ಯಾರಂಭ ಮಾಡಬೇಕು ಅನ್ನೋದು ಉತ್ತರ ಪ್ರದೇಶ ಕಾಂಗ್ರೆಸ್ಸಿಗರ ಆಶಯವೂ ಆಗಿದೆ. ಆದರೆ ಈ ಬಗ್ಗೆ ಅವರಿನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಈ ಹಿಂದೊಮ್ಮೆ ಹೇಳಿದ್ದರು.
ಲೋಕಸಭಾ ಚುನಾವಣೆ ಪರಿಣಾಮ:
ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪೂರ್ವ ಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಚುರುಕಿನಿಂದ ಓಡಾಡಿದ ಪ್ರಿಯಾಂಕಾ ರಾಜಕೀಯಕ್ಕೆ ಔಪಚಾರಿಕವಾಗಿ ಪ್ರವೇಶ ಮಾಡಿದ್ದರು. ಆದ್ರೆ ಸಾರ್ವತ್ರಿಕ ಚುನಾವಣೆ ವೇಳೆ ರಾಜ್ಯದಲ್ಲಿ ಕೇವಲ ಒಂದು ಸ್ಥಾನವನ್ನಷ್ಟೇ ಗೆಲ್ಲಲು ಕೈ ಪಕ್ಷ ಯಶಸ್ವಿಯಾಗಿತ್ತು. ರಾಹುಲ್ ಗಾಂಧಿಯವರಿಗೆ ಅಮೇಥಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮಾತ್ರ ರಾಯಬರೇಲಿಯಿಂದ ಗೆಲುವು ಸಾಧಿಸಿದ್ದರು. ಉತ್ತರಪ್ರದೇಶದಲ್ಲಿ ತನ್ನ ಕೇಡರ್ ಅನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನೆಲ್ಲಾ ಜಿಲ್ಲಾ ಸಮಿತಿಗಳನ್ನು ವಿಸರ್ಜಿಸಿತ್ತು. ಈ ಎಲ್ಲಾ ಕಾರಣಗಳಿಂದ ಪಕ್ಷದ ದೀರ್ಘಾವಧಿಯ ಬೆಳವಣಿಗೆ ಹಿತದೃಷ್ಟಿಯಿಂದ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ ನೆಲೆಯೂರಲು ಇದೀಗ ಸಜ್ಜಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.