ನವದೆಹಲಿ: ಕೇಂದ್ರ ಸರ್ಕಾರದ ಆದೇಶಕ್ಕೂ ಮುನ್ನವೇ ಪ್ರಿಯಾಂಕಾ ಗಾಂಧಿ ದೆಹಲಿಯ ಲೋಧಿ ರಸ್ತೆಯಲ್ಲಿರುವ ತಮ್ಮ ಬಂಗಲೆ ತೊರೆದಿದ್ದಾರೆ. ಆಗಸ್ಟ್ 1ರೊಳಗೆ ನಿವಾಸ ಖಾಲಿ ಮಾಡುವಂತೆ ಕೇಂದ್ರ ಸೂಚನೆ ನೀಡಿತ್ತು. ಇದರ ಮೇಲೂ ಉಳಿದುಕೊಂಡರೆ ಹಾನಿ ಶುಲ್ಕದ ಜತೆ ದಂಡದ ರೂಪದಲ್ಲಿ ಬಾಡಿಗೆ ಶುಲ್ಕ ನೀಡಬೇಕೆಂದು ಎಚ್ಚರಿಕೆ ನೀಡಿತ್ತು.
ಪ್ರಿಯಾಂಕಾ ವಾದ್ರಾ ಗಾಂಧಿಗೆ ಭದ್ರತಾ ಕಾರಣಕ್ಕಾಗಿ ಸರ್ಕಾರಿ ಬಂಗಲೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 1997ರಲ್ಲಿ ದೆಹಲಿಯ ಐಷಾರಾಮಿ ಲೋಧಿ ಎಸ್ಟೇಟ್ ಪ್ರದೇಶದಲ್ಲಿ ನೀಡಿತ್ತು. ಇದೀಗ ಅಧಿಕೃತ ನಿವಾಸ ತೆರವು ಮಾಡಿರುವ ಅವರು ಮನೆಯ ಕೀಯನ್ನು ಸೆಂಟ್ರಲ್ ಪಬ್ಲಿಕ್ ವರ್ಕಸ್ ಡಿಪಾರ್ಟ್ಮೆಂಟ್ ಅಧಿಕಾರಿಗಳಿಗೆ ನೀಡಿದ್ದಾರೆ.
ಗೃಹ ಸಚಿವಾಲಯ ನೀಡಿದ್ದ ವಿಶೇಷ ರಕ್ಷಣಾ ಪಡೆಯನ್ನು (ಎಸ್‌ಪಿಜಿ) ಹಿಂಪಡೆದಿತ್ತು. ಹೀಗಾಗಿ ಈ ಬಂಗಲೆಯಲ್ಲಿ ಉಳಿದುಕೊಳ್ಳಲು ಅವರು ಅರ್ಹತೆ ಪಡೆದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಅವರಿಗೆ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡುತ್ತಿದ್ದಂತೆ ಕಾಂಗ್ರೆಸ್ ಹಾಗೂ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಖಾಲಿಯಾಗಿರುವ ಬಂಗಲೆಯಲ್ಲಿ ಬಿಜೆಪಿ ಸಂಸದ ಅನಿಲ್ ಬಲಾನಿ ಉಳಿದುಕೊಳ್ಳಲಿದ್ದು, ಕಳೆದೆರಡು ದಿನಗಳ ಹಿಂದೆ ಇವರನ್ನು ಪ್ರಿಯಾಂಕಾ ಚಹಾಕೂಟಕ್ಕೆ ಆಹ್ವಾನಿಸಿದ್ದರು.