ನವದೆಹಲಿ: ಉತ್ತರಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪ್ರಿಯಾಂಕ ರಾಬರ್ಟ್ ವಾದ್ರಾ ಇಂದು ಮೊದಲ ಬಾರಿಗೆ ಅಧಿಕೃತ ಹುದ್ದ ಮೇಲೆ ಕಚೇರಿ ಪ್ರವೇಶ ಮಾಡಿದರು. ಇದಕ್ಕೂ ಮೊದಲು ಅವರು ಪತಿ ರಾಬರ್ಟ್ ವಾದ್ರಾ ಅವರನ್ನು ಕಾರಿನಲ್ಲಿ ಇಡಿ ಕಚೇರಿಗೆ ಡ್ರಾಪ್ ಮಾಡಿದ್ದು ವಿಶೇಷವಾಗಿತ್ತು.
ಜನವರಿ 23ರಂದು ಪ್ರಿಯಾಂಕ ಗಾಂಧಿ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಕಾಂಗ್ರೆಸ್ ಆದೇಶ ಹೊರಡಿಸಿತ್ತು. ಇಂದು ಅವರು ಕಚೇರಿಗೆ ಹಾಜರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಂದು ಉದ್ಯಮಿ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ರಾಬರ್ಟ್ ವಾದ್ರಾ ಅವರೊಂದಿಗೆ ಪತ್ನಿ, ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಕೂಡ ಜೊತೆಗಿದ್ದರು. ಇದೇ ವೇಳೆ ಮಾತನಾಡಿರುವ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ನನಗೆ ನೀಡಿರುವ ಜವಾಬ್ದಾರಿಯನ್ನ ಉತ್ತಮವಾಗಿ ನಿರ್ವಹಿಸುವ ಭರವಸೆ ನೀಡಿದ್ದಾರೆ. ಜತೆಗೆ ಗಂಡನ ಜತೆಗೆ ನಾನು ನಿಲ್ಲುವೆ ಎಂದಿದ್ದಾರೆ.
ನವದೆಹಲಿಯ ಜಾಮ್‌ನಗರ ಹೌಸ್‌ನಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಪತ್ನಿ ಪ್ರಿಯಾಂಕ ಗಾಂಧಿ ಜತೆ ಎಸ್‌ಪಿಜಿ ಭದ್ರತೆಯೊಂದಿಗೆ ರಾಬರ್ಟ್ ವಾದ್ರಾ ಆಗಮಿಸಿದ್ದರು. ಇನ್ನು ಇಡಿ ಅಧಿಕಾರಿಗಳ ಮುಂದೆ ಅವರು ಮಾಹಿತಿ ನೀಡಿದ್ದು, ಅದನ್ನೆಲ್ಲ ರೆಕಾರ್ಡ್ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.