ಜೈಸಲ್ಮೇರ್ (ರಾಜಸ್ಥಾನ): ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂತಹ ಸಂತಸದ ಕ್ಷಣದಲ್ಲಿ ದೇಶ ಕಾಯುವ ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ.
ಲಾಂಗ್‌ವಾಲಾ ಪೋಸ್ಟ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಪ್ರತಿಯೊಬ್ಬ ಭಾರತೀಯನ ಶುಭಾಶಯಗಳನ್ನು ನಾನು ಇಂದು ನಿಮ್ಮ ಬಳಿಗೆ ಹೊತ್ತು ತಂದಿದ್ದೇನೆ ಎಂದರು.
ನೀವು ಹಿಮದಿಂದ ಆವೃತವಾದ ಪರ್ವತಗಳಲ್ಲಿ ಅಥವಾ ಮರುಭೂಮಿಗಳಲ್ಲಿರಬಹುದು. ನಾನು ನಿಮ್ಮ ಜತೆ ಹಬ್ಬ ಆಚರಿಸಿದಾಗ ಮಾತ್ರ ನನ್ನ ದೀಪಾವಳಿ ಪೂರ್ಣಗೊಳ್ಳುತ್ತದೆ. ನಿಮ್ಮ ಮುಖದಲ್ಲಿನ ಸಂತೋಷವನ್ನು ನೋಡಿದಾಗ ನನ್ನ ಸಂತೋಷವು ದ್ವಿಗುಣಗೊಳ್ಳುತ್ತದೆ ಎಂದು ಹೇಳಿದರು.
ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹಿಂದೆ ಜೈಸಲ್ಮೇರ್‌ನ ಇಂಡೋ-ಪಾಕಿಸ್ತಾನ ಗಡಿಯಲ್ಲಿರುವ ಲಾಂಗ್‌ವಾಲಾ ಪೋಸ್ಟ್ನ ಬಿಎಸ್‌ಎಫ್ ಮತ್ತು ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದಲ್ಲಿ ಜೈಸಲ್ಮೇರ್‌ನ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದ ಆವರಣದಲ್ಲಿ ವಾಯುಪಡೆಯ ಸೈನಿಕರನ್ನುದ್ದೇಶಿಸಿ ಮಾತನಾಡಿದರು ಮತ್ತು ಅವರೊಂದಿಗೆ ಹಬ್ಬವನ್ನು ಆಚರಿಸಿದರು.