ಹೈದರಾಬಾದ್: ಕಳೆದ ವರ್ಷ ಅಮೆರಿಕದ ಹೌಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ರ್ಯಾಲಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ, ಅಲ್ಲಿ ಅವರು ಬಳಸಿದ್ದ ʼಅಬ್ ಕಿ ಬಾರ್ ಟ್ರಂಪ್ ಸರ್ಕಾರ್ (ಅಧ್ಯಕ್ಷ ಟ್ರಂಪ್‌ಗೆ ಮತ್ತೊಂದು ಪದ!) ಎಂಬ ಘೋಷಣೆಯು, ಟ್ರಂಪ್ ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಜೊ ಬೈಡನ್ ಮುಂದಿನ ವರ್ಷ ಶ್ವೇತಭವನ ಪ್ರವೇಶಿಸಿದಾಗ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಮೂವರು ಉನ್ನತ ರಾಜತಾಂತ್ರಿಕರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಚುನಾವಣಾ ಫಲಿತಾಂಶವು ಜೊ ಬೈಡನ್ ಅವರ ಪರವಾಗಿದೆ ಎಂದು ಅಮೆರಿಕದ ಹಲವಾರು ಪ್ರಮುಖ ಸುದ್ದಿ ಸಂಸ್ಥೆಗಳು ಶನಿವಾರ ಹೇಳಿದ ನಂತರ, ದೇಶದ ಪ್ರಮುಖ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕೆಲವು ನಾಯಕರು, ಕಳೆದ ವರ್ಷ ಹೌಡಿ ಮೋದಿ ರ್ಯಾಲಿಯಲ್ಲಿ ʼಅಪ್ ಕಿ ಬಾರ್ ಟ್ರಂಪ್ ಸರ್ಕಾರ್ʼ ಘೋಷಣೆ ಬಳಸಿದ್ದಕ್ಕಾಗಿ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಜೊ ಬೈಡನ್ ಅವರ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕ ರಾಮ್ ಮಾಧವ್ ಅವರು, ಉಭಯ ನಾಯಕರಾದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ನಿಕಟ ಸಂಬಂಧವು ಜೊ ಬೈಡನ್ ಅವರ ಅಧಿಕಾರದ ಅಡಿ ಮೈತ್ರಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ತಳ್ಳಿಹಾಕಿದ್ದಾರೆ.
ಶ್ವೇತಭವನದಲ್ಲಿ ನಡೆದ ಬದಲಾವಣೆಯನ್ನು ನಿಭಾಯಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ವಿಶ್ವ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಇಲ್ಲ. ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಮತ್ತು ಯುರೋಪ್‌ನ ಕೆಲವು ನಾಯಕರು ಕೂಡಾ ತಮ್ಮ ವಿದೇಶಿ ನೀತಿಗಳನ್ನು ಅಮೆರಿಕದ ಹೊಸ ಆಡಳಿತದೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
ಅದಾಗ್ಯೂ, ಹಲವಾರು ಉನ್ನತ ರಾಜತಾಂತ್ರಿಕರು ಮತ್ತು ವಿದೇಶಾಂಗ ನೀತಿ ತಜ್ಞರು, ಬೈಡನ್ ಆಡಳಿತದ ಅಡಿಯಲ್ಲಿ ಭಾರತ-ಅಮೆರಿಕ ಸಂಬಂಧಗಳು ವಿಶಮಿಸಬಹುದು ಎಂಬ ಆತಂಕವನ್ನು ತಿರಸ್ಕರಿಸುತ್ತಾರೆ. ಅಮೆರಿಕ ಮತ್ತು ಭಾರತಗಳೆರಡಕ್ಕೂ ಪರಸ್ಪರರ ಅವಶ್ಯಕತೆ ಇದೆ ಎಂಬುದು ಅವರ ಪ್ರತಿಪಾದನೆ.
"ಈ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಒಮ್ಮತವಿದೆ ಎಂದು ನಾನು ಭಾವಿಸುತ್ತೇನೆ. ರಿಪಬ್ಲಿಕನ್ನರು ಹಾಗೂ ಮತ್ತು ಡೆಮೊಕ್ರಾಟರಿಬ್ಬರೂ ಭಾರತದೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುತ್ತಾರೆ. ಹೀಗಾಗಿ, ಭಾರತದಲ್ಲಿ ಯಾವುದೇ ಸರ್ಕಾರ ಇದ್ದರೂ ಅವರು ಜೊತೆಯಾಗಿ ಕೆಲಸ ಮಾಡುತ್ತಾರೆ" ಎನ್ನುತ್ತಾರೆ ಅಧ್ಯಕ್ಷ ಒಬಾಮಾ ಅವರ ಅಧಿಕಾರಾವಧಿಯಲ್ಲಿ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಮೀರಾ ಶಂಕರ್.
ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಮ್ಯಾನ್ಮಾರ್ ಮತ್ತು ಕೀನ್ಯಾದಲ್ಲಿ ಭಾರತದ ಉನ್ನತ ರಾಜತಾಂತ್ರಿಕರಾಗಿದ್ದ ರಾಯಭಾರಿ ರಾಜೀವ್ ಭಾಟಿಯಾ ಪ್ರಕಾರ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ವೈಯಕ್ತಿಕ ಸಮಾನಾಸಕ್ತಿಯು ಹೊಸ ಆಡಳಿತದ ಅಡಿಯಲ್ಲಿ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಆಸಕ್ತಿಯ ಏಕೀಕರಣವು ಭವಿಷ್ಯದ ಸಂಬಂಧಗಳಿಗೆ ಚಾಲನೆ ನೀಡುತ್ತದೆ ಎನ್ನುತ್ತಾರೆ ಅವರು.
ಉಭಯ ದೇಶಗಳು ತಮ್ಮ ಸಂಬಂಧಗಳಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿದ್ದರಿಂದ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ಪ್ರಧಾನಿ ಮೋದಿಯವರಿಗೆ ಬಹಳ ಮುಖ್ಯವಾಗಿತ್ತು ಎನ್ನುವ ಭಾಟಿಯಾ, ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಕೆಲವು ತೊಡಕುಗಳಿದ್ದವು. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವಲ್ಲಿ ಪ್ರಧಾನಿ ಮೋದಿಯವರ ಪ್ರಯತ್ನಗಳು ಫಲ ನೀಡಿದವು. ಅದರಲ್ಲಿಯೂ ಚೀನಾದೊಂದಿಗೆ ನಡೆದ ಗಡಿ ಸಂಘರ್ಷದ ಸಂದರ್ಭದಲ್ಲಿ ಅಮೆರಿಕವು ಭಾರತದ ಪರ ಗಟ್ಟಿಯಾಗಿ ನಿಂತಿತು ಎಂದು ವಿಶ್ಲೇಷಿಸುತ್ತಾರೆ.
ವೃತ್ತಿಯಿಂದ ರಾಜತಾಂತ್ರಿಕ ಮತ್ತು ವಿದೇಶಾಂಗ ವ್ಯವಹಾರಗಳ ಪ್ರಮುಖ ಧ್ವನಿ ಎನಿಸಿರುವ ರಾಯಭಾರಿ ವಿಷ್ಣು ಪ್ರಕಾಶ್ ಅವರು, ಸಂಬಂಧಗಳನ್ನು ರೂಪಿಸುವುದು, ನಿರ್ವಹಿಸುವುದು ಮತ್ತು ವರ್ಧಿಸುವುದು, ಅದರಲ್ಲಿಯೂ ಪ್ರಮುಖವಾಗಿ ಆಕ್ರಮಣಕಾರಿ ಚೀನಾ ಒಡ್ಡಿರುವ ಬೆದರಿಕೆಯನ್ನು ಭಾರತ ಮತ್ತು ಅಮೆರಿಕಗಳೆರಡೂ ಸಮಾನವಾಗಿ ಎದುರಿಸಬೇಕಿದೆ. ಇದರಲ್ಲಿ ಉಭಯತ್ರರ ಹಿತಾಸಕ್ತಿ ಅಡಗಿರುವುದರಿಂದ ಈ ವಿಷಯ ಕುರಿತು ನಾವು ಯಾವುದೇ ತಪ್ಪು ಭಾವನೆ ತೋರಿಸಬೇಕಿಲ್ಲ ಎನ್ನುತ್ತಾರೆ.
ಕಷ್ಟಕರವಾಗಿತ್ತು ಅಧ್ಯಕ್ಷ ಟ್ರಂಪ್ ಅವರ ವಿಶ್ವಾಸ ಗಳಿಕೆ:
ತಮ್ಮ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ಪ್ರಧಾನಿ ಮೋದಿಯವರು ಬಹಳ ಆಪ್ತರಾಗಿದ್ದಾರೆಂದು ತಿಳಿದುಬಂದಿದ್ದರಿಂದ, 2016 ರ ಜನವರಿಯಲ್ಲಿ ಶ್ವೇತಭವನದಲ್ಲಿ ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ವಿಶ್ವಾಸವನ್ನು ಗೆಲ್ಲುವಲ್ಲಿ ಮೋದಿ ಸರ್ಕಾರ ಆರಂಭದಲ್ಲಿ ಕಷ್ಟ ಎದುರಿಸಬೇಕಾಯಿತು ಎನ್ನುತ್ತಾರೆ ರಾಯಭಾರಿ ಮೀರಾ ಶಂಕರ್.
ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ, ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ ಅವರು 2015 ರ ಜನವರಿಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದರು ಅವರು.
“ನೀವು ಅಧ್ಯಕ್ಷ ಟ್ರಂಪ್ ಅವರ ಆರಂಭಿಕ ದಿನಗಳನ್ನು ಅವಲೋಕಿಸಿದರೆ, ಅವರನ್ನು ಸಂಪರ್ಕಿಸಲು ಅಥವಾ ಸಭೆಗೆ ಸಮಯವನ್ನು ಪಡೆಯಲು ಅಥವಾ ಭೇಟಿಗೆ ಆಹ್ವಾನವನ್ನು ಪಡೆಯಲು ನಾವು ಸಾಕಷ್ಟು ಕಷ್ಟಪಡಬೇಕಾಯಿತು. ಏಕೆಂದರೆ ಪ್ರಧಾನಿ ಮೋದಿ ಅವರು ಅಧ್ಯಕ್ಷ ಒಬಾಮಾಗೆ ತುಂಬಾ ಹತ್ತಿರವಾಗಿದ್ದಾರೆ ಎಂದು ಟ್ರಂಪ್ ಭಾವಿಸಿದ್ದರು,” ಎಂದು ಈಟಿವಿ ಭಾರತ್‌ಗೆ ಮೀರಾ ಶಂಕರ್ ಹೇಳಿದ್ದಾರೆ.
ದಕ್ಷಿಣ ಕೊರಿಯಾದ ಭಾರತದ ರಾಯಭಾರಿ ಹಾಗೂ ಕೆನಡಾದ ಹೈಕಮಿಷನರ್ ಆಗಿದ್ದ ವಿಷ್ಣು ಪ್ರಕಾಶ್ ಪ್ರಕಾರ, ಟ್ರಂಪ್ ಆಡಳಿತದೊಂದಿಗೆ ಸಂಬಂಧಗಳನ್ನು ಬೆಳೆಸಲು ಮೋದಿ ಸರ್ಕಾರ ಅದೆಷ್ಟು ಶ್ರಮ ಹಾಕಿತ್ತೋ, ಅದೇ ರೀತಿ ನೂತನ ಅಧ್ಯಕ್ಷ ಬೈಡನ್ ಅವರೊಂದಿಗೆ ಸಂಬಂಧವನ್ನು ಬೆಳೆಸಲೂ ಭಾರತೀಯ ರಾಜತಾಂತ್ರಿಕರು ಹೆಚ್ಚು ಶಕ್ತಿ ಮತ್ತು ಶ್ರಮವನ್ನು ಹೂಡಲಿದ್ದಾರೆ. "ಸರಳ ವಿಷಯವೇನೆಂದರೆ ಯಾರೇ ಅಧಿಕಾರದಲ್ಲಿದ್ದರೂ, ನೀವು ಅವರೊಂದಿಗೆ ವ್ಯವಹರಿಸಲೇಬೇಕು” ಎಂದು ವಿಷ್ಣು ಪ್ರಕಾಶ್ ಅವರು ಇಟಿವಿ ಭಾರತ್‌ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಡೆಮಾಕ್ರಟ್‌ರೊಂದಿಗೆ ಕಷ್ಟಕರ ಸಂಬಂಧಗಳು
ಮೋದಿ ಸರ್ಕಾರ ಹಾಗೂ ಡೆಮಾಕ್ರಟರ ನಡುವಿನ ಸಮಸ್ಯೆಗಳ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ ಹೂಸ್ಟನ್ ರ‍್ಯಾಲಿಯೊಂದೇ ಇಲ್ಲ. ಈಗ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್, ಭಾರತೀಯ ಮೂಲದ ಡೆಮಾಕ್ರಟ್ ಕಾಂಗ್ರೆಸ್‌ನ ಪ್ರಮೀಳಾ ಜಯಪಾಲ್ ಸಹಿತ ಡೆಮಾಕ್ರಟಿಕ್ ಪಕ್ಷದ ಹಲವಾರು ಹಿರಿಯ ನಾಯಕರು, ಭಾರತೀಯ ಸಂವಿಧಾನದ ಅಡಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೊಂದಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಅಲ್ಲಿಯ ಮಾನವ ಹಕ್ಕುಗಳ ಸಮಸ್ಯೆಗಳು ಮತ್ತು ನಿರ್ಬಂಧಗಳ ವಿಷಯಗಳ ಕುರಿತು ಮೋದಿ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ.
ಕಳೆದ ವರ್ಷ, ಭಾರತ-ಅಮೆರಿಕದ ನಡುವಿನ ಎರಡನೇ 2+2 ಮಾತುಕತೆಗೆ ಹಾಜರಾಗಲು ಅಮೆರಿಕದಲ್ಲಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಆ ದೇಶದ ಗೃಹ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರೊಂದಿಗಿನ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಸದರಿ ಸಮಿತಿಯು ಪ್ರಮಿಲಾ ಜಯಪಾಲ್ ಅವರನ್ನು ಸಭೆಯಿಂದ ಕೈಬಿಡಲು ಒಪ್ಪಲಿಲ್ಲ ಎಂಬುದೇ ಅದಕ್ಕೆ ಕಾರಣ ಎಂದು ಹೇಳಲಾಗಿತ್ತು. ಚೆನ್ನೈ ಮೂಲದ ಪ್ರಮೀಳಾ ಜಯಪಾಲ್ ಅವರು ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಮೊದಲ ಭಾರತೀಯ-ಅಮೆರಿಕ ಮಹಿಳೆಯಾಗಿದ್ದಾರೆ.
ಸದರಿ ಸಭೆಗೆ ಹಾಜರಾಗಲು ಜೈಶಂಕರ್ ನಿರಾಕರಿಸಿದ್ದಕ್ಕೆ ಕಾರಣವೆಂದರೆ, ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕುವಂತೆ ಭಾರತ ಸರ್ಕಾರಕ್ಕೆ ಅಮೆರಿಕ ಕಾಂಗ್ರೆಸ್ ಕರೆ ನೀಡಿತ್ತು ಹಾಗೂ ಪ್ರಮೀಳಾ ಜಯಪಾಲ್ ಅವರು ಈ ಉಭಯಪಕ್ಷೀಯ ನಿರ್ಣಯವನ್ನು ಸಹ-ಪ್ರಾಯೋಜಿಸಿದ್ದರು.
ಸೆನೆಟ್ ಸ್ಥಾನವನ್ನು ಗೆದ್ದ ಮೊದಲ ಭಾರತೀಯ-ಅಮೆರಿಕನ್ ಮಹಿಳೆ ಮತ್ತು ಈಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಹಾಗೂ ಮತ್ತೊಬ್ಬ ಡೆಮಾಕ್ರಟ್‌ನ ಹಿರಿಯ ನಾಯಕಿ ಎಲಿಜಬೆತ್ ವಾರೆನ್ ಅವರು ತಮ್ಮ ಪಕ್ಷದ ಪ್ರಮೀಳಾ ಜಯಪಾಲ್ ಅವರು ಭಾಗವಹಿಸಲಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಕ್ಕಾಗಿ ಜೈಶಂಕರ್ ಅವರನ್ನು ಟೀಕಿಸಿದ್ದರು. ಹೀಗಿದ್ದರೂ, ಡೆಮೋಕ್ರಾಟ್‌ರಿಂದ ಟೀಕೆಗೆ ಗುರಿಯಾದರೂ ಕೂಡಾ, ಎಸ್. ಜೈಶಂಕರ್ ಅವರು ವಿಚಲಿತರಾಗಲಿಲ್ಲ.
ಸಮಾನ ಆಸಕ್ತಿಗಳಿಂದ ಭವಿಷ್ಯದ ಸಂಬಂಧಗಳಿಗೆ ಚಾಲನೆ:
ಅಮೆರಿಕದ ಹೊಸ ಆಡಳಿತದ ಅಡಿಯಲ್ಲಿ ಈ ಬೆಳವಣಿಗೆಗಳು ಭಾರತ-ಅಮೆರಿಕ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತವೆ ಎಂಬ ಕಳವಳವನ್ನು ಈಟಿವಿ ಭಾರತ್ ಸಂಪರ್ಕಿಸಿದ ಉನ್ನತ ರಾಜತಾಂತ್ರಿಕರು ತೊಡೆದು ಹಾಕಿದ್ದಾರೆ.
"ಒಬಾಮಾ ಅಧ್ಯಕ್ಷರಾಗಿದ್ದಾಗ ಬೈಡನ್ ಮತ್ತು ಅವರ ತಂಡ ಮೋದಿ ಸರ್ಕಾರದ ಕುರಿತು ಚೆನ್ನಾಗಿ ತಿಳಿದುಕೊಂಡಿತ್ತು. ರಾಜಕೀಯ ಮತ್ತು ರಾಜತಾಂತ್ರಿಕತೆಯಲ್ಲಿರುವ ಜನರು ಸಾಕಷ್ಟು ಪ್ರಬುದ್ಧರಾಗಿರುತ್ತಾರೆ. ಭಾರತಕ್ಕೆ ಅಮೆರಿಕ ಬೇಕಿರುವಂತೆ ಅಮೆರಿಕಕ್ಕೆ ಸಹ ಭಾರತ ಬೇಕಿದೆ” ಎನ್ನುತ್ತಾರೆ ರಾಜೀವ್ ಭಾಟಿಯಾ.
ರಾಯಭಾರಿ ವಿಷ್ಣು ಪ್ರಕಾಶ್ ಪ್ರಕಾರ, ಅಮೆರಿಕ ಮತ್ತು ಭಾರತ ಸಹಜ ಪಾಲುದಾರ ದೇಶಗಳಾಗಿವೆ ಹಾಗೂ ಹೆಚ್ಚುತ್ತಿರುವ ದ್ವಿಪಕ್ಷೀಯ ವ್ಯಾಪಾರ ಮತ್ತು ಭದ್ರತಾ ಸಹಕಾರ ಕುರಿತಂತೆ ಆಸಕ್ತಿಯ ಒಮ್ಮುಖತೆಯನ್ನು ಹೊಂದಿದ್ದು ಅದು ಭವಿಷ್ಯದಲ್ಲಿ ಸಹಕಾರವನ್ನು ಮುಂದುವರೆಸಲಿದೆ.
"ವಾಷಿಂಗ್ಟನ್‌ನ ದೃಷ್ಟಿಕೋನದಿಂದ ನಾವು ಈ ಪ್ರದೇಶವನ್ನು ನೋಡಬೇಕು. ಅಮೆರಿಕವು ಚೀನಾದೊಂದಿಗೆ ಕಠಿಣ ಸಂಬಂಧ ಹೊಂದಿದೆ. ಇನ್ನೊಂದೆಡೆ ಪಾಕಿಸ್ತಾನ ಏನು ಮಾಡಲು ಹೊರಟಿದೆ ಎಂಬುದನ್ನು ಅದು ಪತ್ತೆ ಮಾಡಿದೆ. ಚೀನಾದಿಂದ ಸಾಮಾನ್ಯ ಬೆದರಿಕೆ ಅಂಶವಿದೆ. ಏಷ್ಯದ ಈ ಎರಡು ಪ್ರಮುಖ ದೇಶಗಳಾದ ಜಪಾನ್ ಮತ್ತು ಭಾರತವನ್ನು ಹೊರತುಪಡಿಸಿದರೆ ಅಮೆರಿಕಕ್ಕೆ ಈ ಪ್ರದೇಶದಲ್ಲಿ ಪ್ರಮುಖ ಮಿತ್ರ ದೇಶಗಳಿಲ್ಲ. ಆದ್ದರಿಂದ ಈ ಮುಮ್ಮುಖ ಹಾಗೂ ಹಿಮ್ಮುಖ ಅಂಶಗಳಿಂದಾಗಿ ಆಸಕ್ತಿಯ ಒಮ್ಮುಖ ಅಂಶ ಉಂಟಾಗಿದೆ” ಎಂದು ವಿಷ್ಣು ಪ್ರಕಾಶ್ ಅವರು ಈಟಿವಿ ಭಾರತ್‌ಗೆ ಹೇಳಿದ್ದಾರೆ.
"ಭಾರತಕ್ಕೆ ಅಮೆರಿಕ ಹೇಗೋ ಹಾಗೆ ಅಧಿಕಾರಕ್ಕೆ ಬರುತ್ತಿರುವ ಹೊಸ ಆಡಳಿತಕ್ಕೆ ಭಾರತವು ಆದ್ಯತೆಯಾಗಲಿದೆ ಎಂದು ನಾನು ನಂಬುತ್ತೇನೆ" ಎನ್ನುತ್ತಾರೆ ಅವರು.
ವೈಯಕ್ತಿಕ ದ್ವೇಷಕ್ಕೆ ರಾಜತಾಂತ್ರಿಕತೆಯಲ್ಲಿ ಅವಕಾಶವಿಲ್ಲ: ವಿಜಯಲಕ್ಷ್ಮೀ ಪಂಡಿತ್ ನಂತರ ಅಮೆರಿಕದ ಎರಡನೇ ಮಹಿಳಾ ರಾಯಭಾರಿಯಾಗಿದ್ದ ಹಾಗೂ ಅಧ್ಯಕ್ಷ ಒಬಾಮಾ ಅವರ ಅಧಿಕಾರಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೊ ಬೈಡನ್ ಅವರೊಂದಿಗೆ ಸಂವಹನ ನಡೆಸಿದ್ದ ರಾಯಭಾರಿ ಮೀರಾ ಶಂಕರ್ ಅವರು ಟ್ರಂಪ್ ಆಡಳಿತದೊಂದಿಗೆ ಸಂಬಂಧವನ್ನು ಬೆಳೆಸುವಲ್ಲಿ ಮೋದಿ ಸರ್ಕಾರ ಹೆಚ್ಚು ಶ್ರಮ ವಿನಿಯೋಗಿಸಿದ್ದರಿಂದ ಡೆಮಾಕ್ರಟ್‌ರು ಭಾರತದೊಂದಿಗೆ ಆತ್ಮೀಯರಾಗಿ ಇರಲಿಕ್ಕಿಲ್ಲ ಎಂಬ ಅಳುಕನ್ನು ತಳ್ಳಿಹಾಕುತ್ತಾರೆ.
"ಅಧ್ಯಕ್ಷ ಟ್ರಂಪ್ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಂಡಂತೆ (ಬೈಡನ್) ಅವರು ವಿಷಯಗಳನ್ನು ಎಂದಿಗೂ ತೀರಾ ವೈಯಕ್ತಿಕವಾಗಿ ತೆಗೆದುಕೊಳ್ಳುವವರಲ್ಲ. ಅಲ್ಲದೇ ಅವರು (ಡೊನಾಲ್ಡ್ ಟ್ರಂಪ್) ಬಹಳ ವೈಯಕ್ತಿಕ ಶೈಲಿಯ ಆಡಳಿತವನ್ನು ಹೊಂದಿದ್ದರು" ಎಂದು ಈಟಿವಿ ಭಾರತ್ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮೀರಾ ಶಂಕರ್.
"ಅವರು (ಜೊ ಬೈಡನ್) ಪ್ರಧಾನಮಂತ್ರಿಯ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವನ್ನು ಹೊಂದಬಹುದು ಎಂದು ನಾನು ಭಾವಿಸುವುದಿಲ್ಲ. ನಾವು ಸಾಂಸ್ಥೀಕರಿತ ಕಾರ್ಯಶೈಲಿಯನ್ನು ಹೆಚ್ಚು ನೋಡಲಿದ್ದೇವೆ ಹಾಗೂ ಅದು ಅಷ್ಟೊಂದು ವೈಯಕ್ತೀಕರಿಸಲ್ಪಟ್ಟಿಲ್ಲ. ಅಮೆರಿಕದ ಆಸಕ್ತಿಯನ್ನು ಚಾಲನೆಗೊಳಿಸುವಂತಹ ಸಂಬಂಧ ಹೊಂದುವ ತರ್ಕಕ್ಕೆ ಅವರು ಅವಕಾಶ ಕೊಡಲಿದ್ದಾರೆ” ಎನ್ನುತ್ತಾರೆ ಅವರು.
ಮುಂದುವರಿಯಲು ಉಭಯಪಕ್ಷೀಯ ವಿಧಾನವೊಂದೇ ದಾರಿ:
ಅಧ್ಯಕ್ಷ ಟ್ರಂಪ್ ಅವರನ್ನು ತಮ್ಮ ಹೂಸ್ಟನ್ ರ‍್ಯಾಲಿಗೆ ಆಹ್ವಾನಿಸುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಮೀರಾ ಶಂಕರ್ ಅವರಂತಹ ಉನ್ನತ ರಾಜತಾಂತ್ರಿಕರು ಕೆಲ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.
"ಇತರರ ಆಂತರಿಕ ರಾಜಕೀಯದಲ್ಲಿ ಭಾರತವು ಒಂದು ಸಮಸ್ಯೆಯಾಗಿ ಪರಿಣಮಿಸದೇ ಇರುವುದು ಅಪೇಕ್ಷಣೀಯ ಎಂದು ನಾನು ಭಾವಿಸುತ್ತೇನೆ. ಇದು ನಮಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ ಹಾಗೂ ನಾವು ವಿವಾದದ ಮೂಲವಾಗಲು ಬಯಸುವುದಿಲ್ಲ” ಎನ್ನುವ ಮೀರಾ ಶಂಕರ್, "ಒಂದು ವೇಳೆ ಡೆಮೊಕ್ರಾಟ್ ಹಾಗೂ ರಿಪಬ್ಲಿಕನ್ ಇಬ್ಬರೂ ಭಾರತದೊಂದಿಗೆ ಒಮ್ಮತದಿಂದ ಇದ್ದರೆ, ಯಾವುದೇ ಕಡೆ ಹೆಚ್ಚಾಗಿ ವಾಲುವುದು ದೇಶದ ಹಿತಾಸಕ್ತಿಗೆ ಪೂರಕವಾಗುವುದಿಲ್ಲ" ಎಂದು ಎಚ್ಚರಿಸುತ್ತಾರೆ.
ಟ್ರಂಪ್ ಆಡಳಿತಕ್ಕೆ ಹೆಚ್ಚು ಹತ್ತಿರವಾಗುವ ಮೊದಿ ಸರ್ಕಾರದ ವಿಧಾನದ ಬಗ್ಗೆ ಹಲವಾರು ಡೆಮೊಕ್ರಾಟ್‌ರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬುದನ್ನು ಒಪ್ಪುವ ರಾಜೀವ್ ಭಾಟಿಯಾ, ಇದು ಅರ್ಥವಾಗುವಂತದ್ದು ಎನ್ನುತ್ತಾರೆ.
“ಆದರೆ ಭೂತಕಾಲವು ಭೂತಕಾಲವೇ. ರಾಜಕೀಯದಲ್ಲಿ ಎಲ್ಲರೂ ಮುಂದೆ ಹೋಗಲು ನಿರ್ಧರಿಸುವವರೇ. ಈಗ ಪರಿಸ್ಥಿತಿ ಬದಲಾಗಿದೆ” ಎನ್ನುತ್ತಾರೆ ಮುಂಬೈ ಮೂಲದ ವೈಚಾರಿಕ ಸಂಸ್ಥೆ ಗೇಟ್‌ವೇ ಹೌಸ್‌ನ ವಿಶಿಷ್ಟ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ರಾಜತಾಂತ್ರಿಕರಾಗಿರುವ ರಾಜೀವ್ ಭಾಟಿಯಾ.
"ನೀವು ನೋಡಿದಂತೆ, ಪ್ರಧಾನ ಮಂತ್ರಿ ಅವರು ಜೊ ಬೈಡನ್ ಅವರಿಗೆ ತಕ್ಷಣವೇ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ ಇಬ್ಬರು ನಾಯಕರು ಪರಸ್ಪರ ಮಾತನಾಡುತ್ತಾರೆ ಎಂಬುದರ ಬಗ್ಗೆ ನನಗೆ ಖಾತರಿಯಿದೆ” ಎನ್ನುವ ಭರವಸೆಯನ್ನು ಅವರು ವ್ಯಕ್ತಪಡಿಸುತ್ತಾರೆ.