ನವದೆಹಲಿ: ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ನಮ್ಮ ಮುಂದಿನ ಪೀಳಿಗೆಗಳ ಮೇಲೆ ಪ್ರಭಾವ ಬೀರಲಿದೆ. ನಾವೆಲ್ಲರೂ ಭವಿಷ್ಯದ ಭಾರತಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು
ಭವಿಷ್ಯದ ಭಾರತಕ್ಕಾಗಿ ದೇಶದ ನಾಗರಿಕರು ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡಬೇಕು. ಭಾರತೀಯ ಪ್ರಜಾಪ್ರಭುತ್ವ ಎಷ್ಟೊಂದು ಪ್ರಬಲವಾಗಿದೆ ಅನ್ನೋದು ಇವತ್ತಿನ ತೀರ್ಪಿನಿಂದ ಗೊತ್ತಾಗಿದ್ದು, ದೇಶದ ಇತಿಹಾಸದಲ್ಲಿ ಇಂದಿನಿಂದ ಸುವರ್ಣಯುಗ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ನವೆಂಬರ್ 9ರಂದು ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾಗಿತ್ತು. ಅದೇ ದಿನ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ದೇಶದ 125 ಕೋಟಿ ಜನರು ಈ ತೀರ್ಪಿಗೆ ಸಾಕ್ಷಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ರು.
ನವೆಂಬರ್ 9ರ ಈ ದಿನ ದೇಶದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದುಕೊಳ್ಳಲಿದ್ದು ಎಲ್ಲ ಧರ್ಮ, ಜಾತಿಯವರು ಸುಪ್ರೀಂ ತೀರ್ಪು ಸ್ವಾಗತಿಸಿದ್ದಾರೆ.
ಅಯೋಧ್ಯೆ ವಿವಾದದ ಬಗ್ಗೆ ಸುರ್ಪೀಂಕೋರ್ಟ್ ಕೊಟ್ಟಿರುವ ತೀರ್ಪನ್ನು ದೇಶದ ಎಲ್ಲ ಸಮುದಾಯಗಳು ಸರ್ವಾನುಮತದಿಂದ ಸ್ವಾಗತಿಸಿವೆ. ಋಣಾತ್ಮಕ ಅಂಶಗಳಿಗೆ ಇಲ್ಲಿ ಯಾವುದೇ ರೀತಿಯ ಆಸ್ಪದವಿಲ್ಲ. ರಾಷ್ಟ್ರದ ಐಕ್ಯತೆ ಮತ್ತು ಶಾಂತಿಗಾಗಿ ನಾವು ಆದ್ಯತೆ ನೀಡಬೇಕು ಎಂದು ಪ್ರಧಾನಿ ತಿಳಿಸಿದರು.