ನವದೆಹಲಿ: ರೈತರು ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಕೇಂದ್ರ ಸರ್ಕಾರ ರೈತರಿಗೆ ಅವರ ಹಕ್ಕುಗಳನ್ನು ನೀಡಿದೆ. ಆದರೆ ಪ್ರತಿಪಕ್ಷಗಳು ಇದನ್ನು ವಿರೋಧಿಸುತ್ತಿವೆ. ರೈತರು ಅವರ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಇವರಿಗೆ ಬೇಕಾಗಿಲ್ಲ. ಮಧ್ಯವರ್ತಿಗಳು ಲಾಭ ಮಾಡುವುದು ಇವರಿಗೆ ಬೇಕಾಗಿದೆ. ರೈತರ ಸ್ವಾತಂತ್ರ್ಯವನ್ನು ಇವರು ವಿರೋಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ್ನಲ್ಲಿ ನಮಾಮಿ ಗಂಗೆ ಮಿಷನ್ ಅಡಿಯಲ್ಲಿ ಆರು ಬೃಹತ್ ಯೋಜನೆಗಳನ್ನು ಇಂದು ಲೋಕಾರ್ಪಣೆ ಮಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು.
ಕೃಷಿ ಸಂಬಂಧಿತ ಹಲವರು ಕಾಯ್ದೆಗಳಿಗೆ ತಿದ್ದುಪಡಿ, ಕಾರ್ಮಿಕರು ಮತ್ತು ಆರೋಗ್ಯ ಸಂಬಂಧ ಸಂಸತ್ ಅಧಿವೇಶನದಲ್ಲಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಇದು ದೇಶದ ಕಾರ್ಮಿಕರು, ಯುವಕರು, ಮಹಿಳೆಯರು ಹಾಗೂ ರೈತರಿಗೆ ಶಕ್ತಿ ತುಂಬಲಿದೆ. ಆದರೆ ಕೆಲವರು ಇದನ್ನು ವಿರೋಧಿಸುತ್ತಿರುವುದನ್ನ ದೇಶ ಗಮನಿಸುತ್ತಿದೆ ಎಂದರು.
ರೈತರು ಪೂಜಿಸುವ ಯಂತ್ರಗಳಿಗೆ ಬೆಂಕಿ ಹಚ್ಚಿ ಅವರಗೆ ಅವಮಾನ ಮಾಡುತ್ತಿದ್ದಾರೆ. ಈ ಹಿಂದೆ ಎಂಎಸ್‌ಪಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅದನ್ನು ಜಾರಿಗೆ ತಂದಿಲ್ಲ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ನಮ್ಮ ಸರ್ಕಾರ ಎಂಎಸ್‌ಪಿಯನ್ನು ಜಾರಿ ಮಾಡಿದೆ ಎಂದು ಹೇಳಿದರು.
ಗರಿಷ್ಠ ಮಾರಾಟ ಬೆಲೆ(ಎಂಎಸ್‌ಪಿ) ವಿಚಾರದಲ್ಲಿ ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತರು ಎಲ್ಲಿ ಬೇಕಾದರೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿಕೊಳ್ಳಲು ಸ್ವಾತಂತ್ರ್ಯವನ್ನು ನೀಡಿದ್ದೇವೆ. ಆದರೆ ಈ ಸ್ವಾತಂತ್ರ್ಯವನ್ನು ಕೆಲವರು ಸಹಿಸಿಕೊಳ್ಳುತ್ತಿಲ್ಲ. ಅವರ ಮತ್ತೊಂದು ಕಾಳಧನ ಆದಾಯ ಮುಗಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಮ್ಮ ಭದ್ರತಾ ಪಡೆಗಳ ಸಬಲೀಕರಣಕ್ಕಾಗಿ ಏನೂ ಮಾಡಿಲ್ಲ. ವಾಯು ಸೇನೆ ರಫೇಲ್ ಯುದ್ಧ ವಿಮಾನ ಕೇಳಿತ್ತು. ಆದರೆ ಇದು ಅವರ ಕಿವಿಗೆ ಬೀಳಲೇ ಇಲ್ಲ. ನಮ್ಮ ಸರ್ಕಾರ ಫ್ರಾನ್ಸ್‌ನೊಂದಿಗೆ ರಫೇಲ್‌ಗಾಗಿ ಸಹಿ ಮಾಡಿದಾಗ ಇವರಿಗೆ ಸಮಸ್ಯೆ ಉಂಟಾಯಿತು ಎಂದು ತರಾಟೆಗೆ ತೆಗೆದುಕೊಂಡರು.
ನಾಲ್ಕು ವರ್ಷಗಳ ಹಿಂದೆ ಇದೇ ಸಂದರ್ಭದಲ್ಲಿ ನಮ್ಮ ಧೈರ್ಯಶಾಲಿ ಸೈನಿಕರು ಸರ್ಜಿಕಲ್ ದಾಳಿ ಮಾಡಿ ಉಗ್ರರ ತಾಣಗಳನ್ನು ನಾಶ ಮಾಡಿದ್ದರು. ಆದರೆ ಇವರು ದಾಳಿಯ ಸಾಕ್ಷ್ಯಧಾರಗಳಿಗೆ ಒತ್ತಾಯಿಸಿದರು. ಸರ್ಜಿಕಲ್ ದಾಳಿಯನ್ನು ವಿರೋಧಿಸುವ ಮೂಲಕ ಅವರ ಉದ್ದೇಶವನ್ನು ದೇಶಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.