ಮುಂಬೈ: ಲಾಕ್ಡೌನ್ ಮತ್ತಷ್ಟು ವಿಸ್ತರಣೆಯಾಗುತ್ತ ಸಾಗಿದಂತೆ ವಲಸೆ ಕಾರ್ಮಿಕರು ಸಹಜವಾಗಿಯೇ ಆದಷ್ಟು ಬೇಗ ತಮ್ಮೂರುಗಳಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ. ಅವಕಾಶವಿದ್ದರೆ ಸಿಕ್ಕ ವಾಹನಗಳಲ್ಲಿ ಅಥವಾ ಸರ್ಕಾರ ಓಡಿಸುತ್ತಿರುವ ರೈಲುಗಳಲ್ಲಿ ಹೀಗೆ ಯಾವುದಾದರೂ ಮಾರ್ಗದಲ್ಲಿ ನೂರಾರು, ಸಾವಿರಾರು ಕಿಲೋಮೀಟರ್ ದೂರದ ಊರುಗಳಿಗೆ ಕಾರ್ಮಿಕರು ಮರಳುತ್ತಿದ್ದಾರೆ. ಇನ್ನು ಕೆಲ ಕಾರ್ಮಿಕರು ಪ್ರಯಾಣಿಸಲು ಯಾವುದೇ ವಾಹನ ಸಿಗದೆ, ನೂರಾರು ಕಿಲೋಮೀಟರ್ ದೂರದೂರಿಗೆ ಕಾಲ್ನಡಿಗೆಯ ಪ್ರಯಾಣ ಮಾಡುತ್ತಿರುವುದು ವಿಷಾದನೀಯವಾಗಿದೆ. ಈ ಮಧ್ಯೆ ವಲಸೆ ಬಂದು ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಗರ್ಭಿಣಿಯರ ಪಾಡಂತೂ ಹೇಳತೀರದಾಗಿದೆ.
ತಮ್ಮೂರಿನತ್ತ ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕರ ಗರ್ಭಿಣಿ ಪತ್ನಿಯರು ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿರುವ ಮನಕಲಕುವ ಎರಡು ಪ್ರತ್ಯೇಕ ಘಟನೆಗಳು ಶುಕ್ರವಾರ ಮಹಾರಾಷ್ಟ್ರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ನೂರ್ ಮೊಹಮ್ಮದ್ ಎಂಬಾತ ಉತ್ತರ ಪ್ರದೇಶದ ಅಮೇಥಿ ಬಳಿಯ ಇಥಾಗೋರಿಗಂಜ್ ಎಂಬ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಉದ್ಯೋಗವನ್ನರಸಿ ಬಂದಿದ್ದ. ಲಾಕ್ಡೌನ್ನಿಂದಾಗಿ ಬೇರೆ ದಾರಿ ಕಾಣದೆ ಪತ್ನಿ ಇಶ್ರತ್ ಹಾಗೂ ಮೂರು ವರ್ಷದ ಮಗ ಮೊಹಮ್ಮದ್ ನುಮಾನ್ರೊಂದಿಗೆ ಸ್ವಂತ ಊರಿನತ್ತ ಕಾಲ್ನಡಿಗೆ ಪ್ರಯಾಣ ಬೆಳೆಸಿದ್ದ. ಪತ್ನಿ ಇಶ್ರತ್ 9 ತಿಂಗಳ ತುಂಬು ಗರ್ಭಿಣಿಯಾಗಿದ್ದಳು. ಸುಮಾರು 350 ಕಿಮೀ ನಡೆದು ಜಳಗಾಂವ್ ತಲುಪುವಷ್ಟರಲ್ಲಿ ಇಶ್ರತ್ಗೆ ಪ್ರಸವ ವೇದನೆ ಆರಂಭವಾಗಿದೆ. ಗಾಬರಿಯಾದ ಪತಿ ಹತ್ತಿರದಲ್ಲಿದ್ದ ಐಟಿಐ ಕಾಲೇಜಿನ ಕೆಲವರಿಗೆ ವಿಷಯ ತಿಳಿಸಿದ್ದಾನೆ. ಅಲ್ಲಿನ ಜನ ತಕ್ಷಣ ಸ್ಥಳೀಯ ಆರೆಸ್ಸೆಸ್ ಮುಖಂಡ ಕವಿ ಕಾಸರ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಕಾಸರ್, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇಶ್ರತ್ ಆ್ಯಂಬುಲೆನ್ಸ್ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ತಾಯಿ ಹಾಗೂ ಮಗುವಿನ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ತಕ್ಷಣ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚಿಕಿತ್ಸೆಯ ಬಳಿಕ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಂಥದೇ ಮತ್ತೊಂದು ಘಟನೆಯಲ್ಲಿ, ಮಧ್ಯ ಪ್ರದೇಶಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕನ ಪತ್ನಿಯೋರ್ವಳು ಮಾರ್ಗಮಧ್ಯೆ ನಾಗ್ಪುರದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಸುಧಾ ಅರುಣ ಕೌಲ್ ಎಂಬ 19 ವರ್ಷದ ಈ ಮಹಿಳೆಗೆ ಎಂಟನೇ ತಿಂಗಳಲ್ಲಿಯೇ ಹೆರಿಗೆಯಾಗಿದೆ. ಮಹಿಳೆಗೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಹಲವಾರು ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಮಹಿಳೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಾರ್ಗದಲ್ಲಿ ಮಹಿಳೆಗೆ ಪ್ರಸವ ವೇದನೆಯಾಗಿದ್ದನ್ನು ತಿಳಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸುಮಿತ್ ಸೋಮೈಯ ಹಾಗೂ ಜಿಪಂ ಸದಸ್ಯೆ ಆವಂತಿಕಾ ಲೇಕುರ್ವಾಲೆ, ಮಹಿಳೆಯನ್ನು ಗುಮಥಾಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸುವ ಏರ್ಪಾಟು ಮಾಡಿದ್ದರು. ಸದ್ಯ ಮಹಿಳೆಯನ್ನು ನಾಗ್ಪುರದ ಡಾಗಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.


