ನವದೆಹಲಿ: ಕೋವಿಡ್ -19 ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲಾಕ್ಡೌನ್ ಸಫಲವಾಗಿಲ್ಲ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿರುಗೇಟು ಕೊಟ್ಟಿದ್ದಾರೆ.
ನಾವು ಲಾಕ್ಡೌನ್ ಜಾರಿ ಮಾಡಿದಾಗ ಕಾಂಗ್ರೆಸ್ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿತ್ತು. ಈಗ ಲಾಕ್ಡೌನ್ ನಿರ್ಬಂಧ ಸಡಿಲಿಸಿದಾಗ ಮತ್ತೆ ಟೀಕೆ ಮಾಡುತ್ತಿದೆ. ಚೀನಾ, ಇಟಲಿ, ಜರ್ಮನಿ, ಬ್ರೆಜಿಲ್ ಮತ್ತು ಸ್ಪೇನ್ಗಳಿಗೆ ಹೋಲಿಸಿದರೆ ನಮ್ಮಲ್ಲಿ ಭಾರಿ ಪ್ರಮಾಣದ ಜೀವಹಾನಿ ಸಂಭವಿಸಿಲ್ಲ. ಇಡೀ ವಿಶ್ವವೇ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಶ್ಲಾಘಿಸುತ್ತಿರುವಾಗ, ಕಾಂಗ್ರೆಸ್ ಟೀಕೆ ಮಾಡುವುದರಲ್ಲಿ ಮಗ್ನವಾಗಿದೆ. ಕೊರೊನಾ ವಿಷಯದಲ್ಲಿ ರಾಜಕೀಯದಾಟ ಆಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ದೇಶದ ಜನರಲ್ಲಿ ಧೈರ್ಯ ತುಂಬುವುದನ್ನು ಬಿಟ್ಟು, ಸರ್ಕಾರದ ವಿರುದ್ಧ ಅಪಪ್ರಚಾರದ ಆಂದೋಲನ ನಡೆಸುತ್ತಿದೆ ಎಂದು ಜಾವಡೇಕರ್ ಆರೋಪಿಸಿದರು.
ಇನ್ನು 3,000 ರೈಲುಗಳ ಮೂಲಕ 45 ಲಕ್ಷ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದೇವೆ. ನಮ್ಮ ಉತ್ತರ ಪ್ರದೇಶ ಅಥವಾ ಕರ್ನಾಟಕ ರಾಜ್ಯ ಸರ್ಕಾರ ಬಡವರ ಅಕೌಂಟ್ಗೆ ಹಣ ಹಾಕಿದೆ. ಇದರಿಂದ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ಯಾವ ರಾಜ್ಯ ಸರ್ಕಾರಗಳು ಹೀಗೆ ಈ ಕೆಲಸ ಮಾಡಿವೆ? ಎಂದು ಪ್ರಶ್ನಿಸಿದರು.
7,500 ರೂಪಾಯಿಗಳನ್ನು ಬಡವರ ಅಕೌಂಟ್ಗೆ ವರ್ಗಾವಣೆ ಮಾಡಬೇಕೆಂಬ ಕಾಂಗ್ರೆಸ್ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ನಾವು ಆಹಾರ ಭದ್ರತೆ ಯೋಜನೆಯಡಿ 80 ಕೋಟಿ ಜನರಿಗೆ ಆಹಾರ, ಧಾನ್ಯ ವಿತರಿಸಿದ್ದೇವೆ. ರೇಷನ್ ಕಾರ್ಡ್ ಇಲ್ಲದೇ ಇರುವ 10 ಕೋಟಿ ವಲಸೆ ಕಾರ್ಮಿಕರಿಗೆ 10 ಕೆ.ಜಿ ಆಹಾರ ಧಾನ್ಯ ಮತ್ತು 2 ಕೆ.ಜಿ ಬೇಳೆಯನ್ನು ನೀಡಿದ್ದೇವೆ. ಜೊತೆಗೆ ಮಹಿಳೆಯರ ಬ್ಯಾಂಕ್ ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಿದ್ದೇವೆ. ತಲಾ 2,000 ರೂಪಾಯಿ ನಗದು ಸರಿಸುಮಾರು 9 ಕೋಟಿ ರೈತರ ಕೈ ಸೇರಿದೆ. 8 ಕೋಟಿ ಮನೆಗಳಿಗೆ ಉಚಿತ ಅಡುಗೆ ಅನಿಲ ವಿತರಿಸಿದ್ದೇವೆ. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು ತಲಾ 1,000 ಹಣ ಪಡೆದಿದ್ದಾರೆ. ತಳ್ಳುಗಾಡಿ ವ್ಯಾಪಾರಸ್ಥರು 10,000 ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ಪಡೆಯಲಿದ್ದು, ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುತ್ತಿದ್ದೇವೆ ಎಂದು ಜಾವಡೇಕರ್ ವಿವರಿಸಿದರು.