ಬಿಹಾರ: ಜಮೀನು ವಿವಾದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಗರ್ಭಿಣಿ ಹಾಗೂ ಆಕೆಯ ಮೂವರು ಮಕ್ಕಳನ್ನು ದುಷ್ಕರ್ಮಿಗಳು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಿಹಾರದ ಬರಾಗಾಚಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಧೋಪಾಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ ಘಟನೆ ನಡೆದಿದ್ದು, ಬರ್ಬರ ಕೊಲೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಜಮೀನು ವಿವಾದವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಎಂಟು ತಿಂಗಳ ಗರ್ಭಿಣಿಯಾದ ಟೆಸ್ಸುಮ್ (35) ಹಾಗೂ ಆಕೆಯ ಮೂವರು ಮಕ್ಕಳಾದ ಅಲಿಯಾ, ಶಬ್ಬೀರ್ ಮತ್ತು ಸಮೀರ್ ಕೊಲೆಗೀಡಾದವರು.
ರಂಜಾನ್ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಪ್ರಾರ್ಥನೆಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ದುಷ್ಕೃತ್ಯ ಎಸಗಿದ್ದಾರೆ. ಭೀಕರ ಕೊಲೆಯಿಂದ ಗ್ರಾಮದಲ್ಲಿ ಭಯ ಹಾಗೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಕೊಲೆ ಬಗ್ಗೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.