ನವದೆಹಲಿ : ಕೊರೊನಾ ಸಾಂಕ್ರಾಮಿಕದ ನಂತರ ಈಗ ದೇಶದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಈ ಕಾರಣಕ್ಕೆ ಕೋಳಿ ಉದ್ಯಮಕ್ಕೆ ಭಾರೀ ನಷ್ಟ ಉಂಟಾಗಿದೆ.
ಉತ್ತರಭಾರತದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕೋಳಿಗಳನ್ನು ಸಾಗಿಸುವುದನ್ನು ನಿಷೇಧಿಸಿರುವುದರಿಂದ ಕೋಳಿ ಬೆಲೆಯಲ್ಲಿ ಭಾರೀ ಪರಿಣಾಮ ಬೀರಿದೆ. ಈ ಹಿನ್ನೆಲೆ ಉದ್ಯಮದ ನಿಯೋಗ ಇಂದು ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಈ ಬಗ್ಗೆ ತನ್ನ ಕಷ್ಟ ಹಂಚಿಕೊಳ್ಳಲಿದೆ. ಕೋಳಿಗಳಲ್ಲಿ ಈ ಹಕ್ಕಿಜ್ವರದ ಪ್ರಕರಣಗಳು ಹರಿಯಾಣದಲ್ಲಿ ಮಾತ್ರ ಕಂಡು ಬಂದಿವೆ.
ಪ್ರಮುಖವಾಗಿ ಅದರಲ್ಲೂ ಕಾಡು ಪಕ್ಷಿಗಳು ಅಥವಾ ಬೇರೆಡೆ ವಲಸೆ ಬಂದ ಪಕ್ಷಿಗಳಲ್ಲಿ ಮಾತ್ರ ಕಂಡು ಬಂದಿವೆ. ಹಾಗೆ ಕೆಲವು ಪ್ರಕರಣಗಳಲ್ಲಿ ಮಾತ್ರ ಕೋಳಿ ಬಾತುಕೋಳಿಗಳಲ್ಲಿಯೂ ಈ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಆದಾಗ್ಯೂ, ಕೋಳಿ ಉತ್ಪನ್ನಗಳ ಬೇಡಿಕೆ ಶೇ.70ಕ್ಕಿಂತ ಕಡಿಮೆಯಾಗಿದೆ ಎಂದು ಕೋಳಿ ವ್ಯಾಪಾರಿಗಳು ತಿಳಿಸಿದ್ದಾರೆ.
ಪೌಲ್ಟ್ರಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ರಮೇಶ್ ಖತ್ರಿ ಮಾಹಿತಿ ನೀಡಿ, ಕಳೆದ ಮೂರ್ನಾಲ್ಕು ದಿನಗಳಲ್ಲಿ ಕೋಳಿ ಮಾರಾಟವು ಸುಮಾರು ಶೇ.70 ರಿಂದ 80ರಷ್ಟು ಕುಸಿದಿದೆ. ಆದರೆ, ಬೆಲೆಯಲ್ಲಿ ಶೇಕಡಾ 50 ರಷ್ಟು ಕಡಿಮೆಯಾಗಿದೆ. ಮೊಟ್ಟೆಯ ಬೆಲೆಯೂ ಸಹ ಸುಮಾರು ಶೇ.15 ರಿಂದ 20 ರಷ್ಟು ಇಳಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಓದಿಗಾಗಿ: ಹಕ್ಕಿ ಜ್ವರ: ಹರಿಯಾಣದಲ್ಲಿ ಸಾವಿರ ಕೋಳಿ, ಮಧ್ಯಪ್ರದೇಶದಲ್ಲಿ 200 ಕಾಗೆಗಳ ಸಾವು
ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಕೋಳಿಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ರವಾನೆ ಮಾಡುವುದನ್ನು ನಿಲ್ಲಿಸಲಾಗಿದೆ. ಈ ಕಾರಣಕ್ಕೆ ಕೋಳಿ ಉದ್ಯಮದ ಮೇಲೆ ಈ ಹೊಡೆತ ಬೀಳುವುದಕ್ಕೆ ಪ್ರಮುಖ ಕಾರಣ ಎಂದು ಖತ್ರಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಹರಿಯಾಣದಲ್ಲಿ ಹಕ್ಕಿ ಜ್ವರ ಇರುವುದು ದೃಢಪಡಿಸಲಾಗಿದೆ. ಅಲ್ಲಿ ಸಾಕಣೆ ಕೇಂದ್ರಗಳು ಹಾಗೂ ಪದರ ಸಾಕಣೆ ಕೇಂದ್ರಗಳಲ್ಲಿ ಈ ಜ್ವರ ಕಂಡು ಬಂದಿದೆ. ಆದರೆ, ಬಾಯ್ಲರ್ ಸಾಕಣೆ ಕೇಂದ್ರಗಳಲ್ಲಿ ಈ ಕೋಳಿ ಜ್ವರ ಕಾಣಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಉದ್ಯಮದ ನಿಯೋಗ ಇಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಲಿದ್ದು, ಇದರಲ್ಲಿ ರಮೇಶ್ ಖತ್ರಿ ಕೂಡ ಇರಲಿದ್ದಾರೆ.
ಕೋಳಿ ಫಾರ್ಮ್ ಆಪರೇಟರ್ ರಾಕೇಶ್ ಮನ್ಹಾಸ್ ಪ್ರತಿಕ್ರಿಯೆ ನೀಡಿದ್ದು, ಹಕ್ಕಿಜ್ವರ ಹರಡುವ ವದಂತಿಗಳು ಉದ್ಯಮಕ್ಕೆ ಭಾರಿ ನಷ್ಟವನ್ನುಂಟು ಮಾಡುತ್ತವೆ. ಇಂಥಹ ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.
ಹಾಗೆಯೇ ಕೇಂದ್ರ ಪ್ರಾಣಿ ಪಶುಸಂಗೋಪನಾ ಸಚಿವಾಲಯವು, ಹಕ್ಕಿ ಜ್ವರ ಏಳು ರಾಜ್ಯಗಳಲ್ಲಿ ಕಂಡು ಬಂದಿದೆ. ಅದರಲ್ಲೂ ಹರಿಯಾಣದಲ್ಲಿ ಮಾತ್ರ ಈ ಹಕ್ಕಿ ಜ್ವರ ದೃಢವಾಗಿದೆ ಎಂದು ಸ್ಪಷ್ಟಪಡಿಸಿದೆ. ಭಾರತದಲ್ಲಿ ಕೋಳಿ ಮತ್ತು ಮೊಟ್ಟೆಗಳನ್ನು ತಿನ್ನುವುದರಿಂದ ಮಾನವರಲ್ಲಿ ಹಕ್ಕಿ ಜ್ವರ ಹರಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೂ ಸೋಂಕಿತ ಪಕ್ಷಿಗಳನ್ನು ತಿನ್ನದಿರಲು ಪ್ರಯತ್ನಿಸಬೇಕು ಎಂದೂ ಕೂಡ ಹೇಳಿದ್ದಾರೆ. ಕಲುಷಿತ ಕೋಳಿ ಉತ್ಪನ್ನಗಳನ್ನು ತಿನ್ನುವ ಮೂಲಕ ಏವಿಯನ್ ಇನ್ಫ್ಲುಯೆನ್ಸ (ಎಐ) ವೈರಸ್ ಮನುಷ್ಯರಿಗೆ ಹರಡಿತು ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ ಎಂದು ಪಶುಸಂಗೋಪನಾ ಆಯುಕ್ತ ಪ್ರವೀಣ್ ಮಲಿಕ್ ಕೂಡ ತಿಳಿಸಿದ್ದಾರೆ.
ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಪೌಲ್ಟ್ರಿ ಫೆಡರೇಶನ್ ಆಫ್ ಇಂಡಿಯಾ ಸಲಹೆಗಾರ ವಿಜಯ್ ಸರ್ದಾನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೇಶದ ಕೋಳಿ ಉದ್ಯಮವು ಸುಮಾರು 1.25 ಲಕ್ಷ ಕೋಟಿ ರೂ. ಮೌಲ್ಯದ ವ್ಯಾಪಾರ ವಹಿವಾಟಿನದಾಗಿತ್ತು.
ಇದು ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ತೀವ್ರವಾಗಿ ಅರ್ಧಕ್ಕೆ ಇಳಿದಿದೆ. ಕೊರೊನಾ ಮೊದಲು 1.25 ಲಕ್ಷ ಕೋಟಿ ರೂ.ಗಳಷ್ಟಿದ್ದ ಕೋಳಿ ಉದ್ಯಮದ ವ್ಯವಹಾರ ಈಗ 60,000 ರಿಂದ 70,000 ಕೋಟಿಗೆ ಇಳಿದಿದೆ ಎಂದಿದ್ದಾರೆ.