ಮುಂಬೈ: 288 ಕ್ಷೇತ್ರದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ 161 ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಜಯ ಸಾಧಿಸಿದ್ದು, ಈಗಾಗಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆದಿದ್ದು, 50:50 ಸೂತ್ರದ ಅಳವಡಿಕೆಗೆ ಶಿವಸೇನೆ ಬಿಗಿ ಪಟ್ಟು ಹಿಡಿದಿದೆ.
ಈ ಮಧ್ಯೆ ಇದೇ ಮೊದಲ ಸಲ ಠಾಕ್ರೆ ಕುಟುಂಬದಿಂದ ಚುನಾವಣಾ ಕಣಕ್ಕಿಳಿದಿದ್ದ 29 ವರ್ಷದ ಆದಿತ್ಯ ಠಾಕ್ರೆ ವರ್ಲಿಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದು, ಅವರೇ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಎಂಬ ಪೋಸ್ಟರ್ ಇದೀಗ ರಾರಾಜಿಸುತ್ತಿವೆ.
ವರ್ಲಿ ಕ್ಷೇತ್ರದಲ್ಲಿ ಪೋಸ್ಟರ್ವೊಂದು ರಾರಾಜಿಸುತ್ತಿದ್ದು, ಅದರಲ್ಲಿ ಶಿವಸೇನಾ ಸ್ಥಾಪಕ ಬಾಳ್ ಠಾಕ್ರೆ, ಅಧ್ಯಕ್ಷ ಉದ್ಧವ್ ಠಾಕ್ರೆ ಫೋಟೋ ಜತೆ ಆದಿತ್ಯ ಠಾಕ್ರೆ ಮುಂದಿನ ಮುಖ್ಯಮಂತ್ರಿ ಎಂದು ಬರೆಯಲಾಗಿದೆ.
ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಎನ್ಸಿಪಿ ಸುರೇಶ್ ಮಾನೆ ವಿರುದ್ಧ ಭರ್ಜರಿ 70 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲು ಮಾಡಿರುವ ಆದಿತ್ಯ ಠಾಕ್ರೆ ಮೊದಲ ಪ್ರಯತ್ನದಲ್ಲಿಯೇ ಜಯ ಸಾಧಿಸಿದ್ದಾರೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104, ಶಿವಸೇನೆ 56, ಎನ್ಸಿಪಿ 54 ಹಾಗೂ ಕಾಂಗ್ರೆಸ್ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.