ನವದೆಹಲಿ : ಕಳೆದ ಮೂರು ವಾರಗಳಿಂದ ಹಲವು ರಾಜ್ಯಗಳಲ್ಲಿ ಹೊಸ ಕೊರೊನಾ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ, ಚಳಿಗಾಲದಲ್ಲಿ ಕೊರೊನಾದ ಎರಡನೇ ಅಲೆ ಬರುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಹೇಳಿದ್ದಾರೆ.
ಪೌಲ್, ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಒಂದು ಸಲ ಕೋವಿಡ್ ಲಸಿಕೆ ಲಭ್ಯವಾದರೆ, ಅದನ್ನು ಜನರಿಗೆ ತಲುಪಿಸಲು ಸಾಕಷ್ಟು ಸಂಪನ್ಮೂಲಗಳು ನಮ್ಮಲ್ಲಿವೆ. ಭಾರತದಲ್ಲಿ ಕಳೆದ ಮೂರು ವಾರಗಳಿಂದ ಹೊಸ ಕೋವಿಡ್ ಪ್ರಕರಣ ಮತ್ತು ಮರಣ ಪ್ರಮಾಣ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.
ಐದು ರಾಜ್ಯಗಳಲ್ಲಿ (ಕೇರಳ, ಕರ್ನಾಟಕ, ರಾಜಸ್ಥಾನ, ಚತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳ) ಮತ್ತು 3 ರಿಂದ 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಲಸಿಕೆ ನಿರ್ವಹಣೆ ತಜ್ಞರ ಸಮಿತಿಯ ಮುಖ್ಯಸ್ಥರಾಗಿರುವ ಪೌಲ್ ಅವರ ಪ್ರಕಾರ, ಕೊರೊನಾ ವಿಚಾರದಲ್ಲಿ ಭಾರತ ಈಗ ಸ್ವಲ್ಪ ಉತ್ತಮ ಗುಣಮಟ್ಟದಲ್ಲಿದೆ. ಆದರೆ, ಇನ್ನೂ ಬಹಳ ದೂರ ಸಾಗಬೇಕಿದೆ. ಯಾಕೆಂದರೆ, ದೇಶದಲ್ಲಿ ಶೇ. 90 ರಷ್ಟು ಜನರು, ಕೊರೊನಾ ಸೋಂಕಿಗೆ ತುತ್ತಾಗಲಿದ್ದಾರೆ ಎಂದಿದ್ದಾರೆ.
ಚಳಿಗಾಲದಲ್ಲಿ ಭಾರತವೂ ಎರಡನೇ ಕೊರೊನಾ ಅಲೆಯನ್ನು ಎದುರಿಸಬಹುದಾ? ಎಂಬ ಬಗ್ಗೆ ಪ್ರತಿಕ್ರಿಯಿಸುತ್ತಾ, ಚಳಿಗಾಲದ ಆರಂಭದೊಂದಿಗೆ ಯುರೋಪ್ ದೇಶಗಳಲ್ಲಿ ಎರಡನೇ ಹಂತದ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ, ನಮ್ಮ ದೇಶದಲ್ಲಿಯೂ ಇದನ್ನೂ ತಳ್ಳಿ ಹಾಕುವಂತಿಲ್ಲ. ನಾವು ಇನ್ನೂ ಕೊರೊನಾ ವೈರಸ್ ಬಗ್ಗೆ ಕಲಿಯುತ್ತಿದ್ದೇವೆ ಎಂದು ಹೇಳಿದ್ದಾರೆ.