ಮಾಲೆ (ಮಾಲ್ಡೀವ್ಸ್) : ಪ್ರಸ್ತುತ ಭಾರತದ ಭೇಟಿಯಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಬುಧವಾರ ಮಾಲ್ಡೀವ್ಸ್‌ಗೆ ಆಗಮಿಸಿದ್ದು, ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೂರು ದಶಕಗಳಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಅಮೆರಿಕದ ಮೊದಲ ವಿದೇಶಾಂಗ ಕಾರ್ಯದರ್ಶಿಯಾಗಿರುವುದಕ್ಕೆ ರೋಮಾಂಚನಗೊಂಡಿದ್ದೇನೆ. ಅಮೆರಿಕ ಹಾಗೂ ಮಾಲ್ಡೀವ್ಸ್ ನಡುವಿನ ಸಂಬಂಧ ವೃದ್ಧಿ ಮಾತುಕತೆಗೆ ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಭಾರತ ಮತ್ತು ಅಮೆರಿಕದ 2+2 ಮಾತುಕತೆಯನ್ನು ಮುಕ್ತಾಯಗೊಳಿಸಿದ ಪೊಂಪಿಯೊ, ಮಂಗಳವಾರ ಶ್ರೀಲಂಕಾಕ್ಕೂ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು, ಕಡಲ ಸುರಕ್ಷತೆ, ಭಯೋತ್ಪಾದನೆ ವಿರುದ್ಧದ ಹೋರಾಟದವರೆಗೆ ಪಾಲುದಾರಿಕೆಯನ್ನು ಹಂಚಿಕೊಳ್ಳಲು ಮೈಕ್ ಪೊಂಪಿಯೊ ಮಾಲೆಗೆ ಪ್ರಯಾಣಿಸಲಿದ್ದಾರೆ ಎಂದು ಕಳೆದ ವಾರ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮೋರ್ಗನ್ ಒರ್ಟಾಗಸ್ ಹೇಳಿದ್ದರು.
ಮಾಲ್ಡೀವ್ಸ್ ನಂತರ, ಪೊಂಪಿಯೊ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದ ಮಾತುಕತೆಗಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಲಿದ್ದು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರು ಪೊಂಪಿಯೋಗೆ ಸಾಥ್ ನೀಡಲಿದ್ದಾರೆ.