ನವದೆಹಲಿ: ಫೆಬ್ರವರಿ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ಗಲಭೆ ಜೊತೆ ತಬ್ಲಿಘಿ ಜಮಾತ್ ಸಂಬಂಧ ಇದೆ ಎಂದು ದೆಹಲಿ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಈಶಾನ್ಯ ದೆಹಲಿಯ ಶಿವ ವಿಹಾರ್ ಪ್ರದೇಶದ ರಾಜಧಾನಿ ಶಾಲೆಯ ಬಳಿ ನಡೆದ ಗಲಭೆ ಬಗ್ಗೆ ದೆಹಲಿ ಅಪರಾಧ ವಿಭಾಗ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಶಾಲೆಯ ಮಾಲೀಕ ಫೈಸಲ್ ಫಾರೂಕ್ ಉತ್ತರ ಪ್ರದೇಶದ ದಿಯೋಬಂದ್‌ಗೆ ಭೇಟಿ ನೀಡಿದ್ದರು ಮತ್ತು ಹಜರತ್ ನಿಜಾಮುದ್ದೀನ್ ಮರ್ಕಜ್ ಜೊತೆ ಸಂಪರ್ಕ ಹೊಂದಿದ್ದರು ಎಂದು ತಿಳಿಸಲಾಗಿದೆ.
ಫೈಸಲ್ ಮೊಬೈಲ್ ಕರೆ ಪರಿಶೀಲನೆ ನಡೆಸಿದ್ದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಮುಖ ಸದಸ್ಯರು, ಪಿಂಜ್ರಾಟೋಡ್ ಗುಂಪು, ಜಾಮಿಯಾ ಸಮನ್ವಯ ಸಮಿತಿ, ಹಜರತ್ ನಿಜಾಮುದ್ದೀನ್ ಮರ್ಕಜ್ ಮತ್ತು ದಿಯೋಬಂದ್ ಸೇರಿದಂತೆ ಕೆಲವು ಮೂಲಭೂತ ಮುಸ್ಲಿಂ ಧರ್ಮಗುರುಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶಿವ ವಿಹಾರ್ ಮತ್ತು ನೆರೆಯ ಪ್ರದೇಶಗಳಲ್ಲಿ ಹಿಂಸಾಚಾರ ಪ್ರಾರಂಭವಾಗುವ ಒಂದು ದಿನ ಮೊದಲು ಫೆಬ್ರವರಿ 23 ರಂದು ಫಾರೂಕ್ ದಿಯೋಬಂದ್‌ಗೆ ಭೇಟಿ ನೀಡಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ಗಲಭೆಕೋರರು ರಾಜಧಾನಿ ಶಾಲೆಯ ಒಳಗೆ ಬಿಡಾರ ಹೂಡಿದ್ದರು ಮತ್ತು ಟೆರೇಸ್‌ನಿಂದ ಗುಂಡುಗಳನ್ನು ಹಾರಿಸಿದ್ದು, ಪೆಟ್ರೋಲ್ ಬಾಂಬ್, ಆ್ಯಸಿಡ್, ಇಟ್ಟಿಗೆ, ಕಲ್ಲುಗಳನ್ನು ಶಾಲೆಯ ಟೆರೇಸ್‌ನಿಂದ ಎಸೆದಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.