ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಘೋಷಣೆ ಮಾಡಿದೆ. ಬರೋಬ್ಬರಿ 8,575 ಕೋಟಿ ರೂ ವೆಚ್ಚದ 16.6 ಕಿಲೋ ಮೀಟರ್ ಪೂರ್ವ - ಪಶ್ಚಿಮ ಮೆಟ್ರೋ ಕಾರಿಡಾರ್ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಡಿಸೆಂಬರ್ 2021ರ ವೇಳೆಗೆ ಈ ಯೋಜನೆ ಪೂರ್ಣಗೊಳಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದ್ದು, ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್, ಈ ಯೋಜನೆಯಿಂದ ಬಂಗಾಳದಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ. 12 ನಿಲ್ದಾಣ ಒಳಗೊಂಡಿರುವ ಈ ಮೆಟ್ರೋ ಕಾರಿಡಾರ್ ಯೋಜನೆ ಒಟ್ಟು 16.6 ಕಿಲೋ ಮೀಟರ್ ಉದ್ದ ಇದೆ.
ದುರ್ಗಾ ಪೂಜೆ ವೇಳೆ ಕೋಲ್ಕತ್ತಾಗೆ ಈ ಉಡುಗೊರೆ ಸಿಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಗೋಯಲ್ ತಿಳಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದ್ದು, ಟಿಎಂಸಿ ಸರ್ಕಾರ ಸೋಲಿಸಲು ಕೇಂದ್ರ ಈ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.