ಚೆನ್ನೈ: ಪಟ್ಟಾಲಿ ಮಕ್ಕಲ್ ಕಚ್ಚಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು 200 ಜನ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹ:
ಅನ್ಬುಮಣಿ ರಾಮದಾಸ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸರ್ಕಾರಿ ಉದ್ಯೋಗ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ವನ್ನಿಯಾರ್ ಸಮುದಾಯಕ್ಕೆ ಶೇ 20 ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ರೈಲಿಗೆ ಕಲ್ಲು, ರಸ್ತೆ ಸಂಚಾರ ಅಸ್ತವ್ಯಸ್ತ:
ಪೆರುಂಗಲಥೂರಿನ ಜಿಎಸ್ಟಿ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿದೆ. ಪ್ರತಿಭಟನಾಕಾರರು ರೈಲು ರೋಖೋ ಕೂಡಾ ನಡೆಸಿದ್ದಾರೆ. ಅಲ್ಲದೆ, ತಿರುವನಂತಪುರಂನಿಂದ ಅನಂತಪುರಿ ಎಕ್ಸ್‌ಪ್ರೆಸ್‌ಗೆ ಕಲ್ಲು ಹೊಡೆದಿದ್ದಾರೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಪೆರುಂಗಲಥೂರ್ ಬಳಿಯ ರಸ್ತೆಯಲ್ಲಿ ಆಂಬುಲೆನ್ಸ್‌ಗಳು ಸಿಲುಕಿಕೊಂಡಿವೆ. ಈ ಎಲ್ಲಾ ಕಾರಣದಿಂದ ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಟೇಲ್, ಗುಜ್ಜರ್ ಮಾದರಿ ಹೋರಾಟದ ಎಚ್ಚರಿಕೆ:
ಸಮುದಾಯದ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ಗುಜರಾತ್‌ನಲ್ಲಿನ ಪಟೇಲ್ ಆಂದೋಲನ ಮತ್ತು ರಾಜಸ್ಥಾನದಲ್ಲಿ ಗುಜ್ಜರ್ ಆಂದೋಲನಗಳಂತೆಯೇ ತೀವ್ರ ಪ್ರತಿಭಟನೆ ನಡೆಸುವುದಾಗಿ ರಾಮದಾಸ್ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.