ಸೊಲ್ಲಾಪುರ (ಮಹಾರಾಷ್ಟ್ರ): ಲೋಕಸಭೆ ಚುನಾವಣಾ ದಿನಾಂಕ ಘೋಷಿಸಿದ ದಿನವೇ ಮಾದರಿ ನೀತಿ ಸಂಹಿತೆಯನ್ನೂ ಚುನಾವಣಾ ಆಯೋಗ ಜಾರಿಗೆ ತಂದಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಮಹಾರಾಷ್ಟ್ರದ ಸೊಲ್ಲಾಪುರದ ಎಸ್ಬಿಐ ಎಟಿಂಎಂ ಯಂತ್ರದ ಪರದೆ ಮೇಲೆ ಪ್ರಧಾನಿ ಮೋದಿ ಭಾವಚಿತ್ರವಿರುವ ಜನಧನ್ ಹಾಗೂ ಮುದ್ರಾ ಯೋಜನೆಯ ಜಾಹೀರಾತು ಪ್ರದರ್ಶನಗೊಳ್ಳುತ್ತಿದೆ. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಮುಗಿಬೀಳುತ್ತಿವೆ.
ಸೊಲ್ಲಾಪುರದ ಹೃದಯ ಭಾಗದಲ್ಲಿಯೇ ಈ ಎಟಿಎಂ ಕೇಂದ್ರ ಇದ್ದು, ನಿತ್ಯ ಹಲವಾರು ಮಂದಿ ಬಳಸುತ್ತಿದ್ದಾರೆ. ಆದರೂ ಇಲ್ಲಿನ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ನೀತಿ ಸಂಹಿತೆ ಜಾರಿಯಾದ ವೇಳೆ ಸರ್ಕಾರದ ಯೋಜನೆಗಳನ್ನೂ ಪ್ರಚಾರ ಮಾಡಬಾರದೆಂಬುದು ಆಯೋಗದ ನಿಯಮವಾಗಿದೆ.