ನವದೆಹಲಿ/ಮಂಗಳೂರು: ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್ ಲೋಕಾರ್ಪಣೆ ಮಾಡಲಿದ್ದಾರೆ.
ಕೇರಳದ ಕೊಚ್ಚಿಯಿಂದ ಕರ್ನಾಟಕದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಸುವ ಪೈಪ್‌ಲೈನ್ ಅನ್ನು GAIL (ಇಂಡಿಯಾ) ಲಿಮಿಟೆಡ್ ನಿರ್ಮಿಸಿದ್ದು, ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು 'ಒನ್ ನೇಷನ್ ಒನ್ ಗ್ಯಾಸ್ ಗ್ರಿಡ್' ಕಡೆಗೆ ಮೈಲಿಗಲ್ಲಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಸಮಾರಂಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರೊಂದಿಗೆ ಕರ್ನಾಟಕ ಮತ್ತು ಕೇರಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ.
450 ಕಿ.ಮೀ ಉದ್ದದ ಪೈಪ್‌ಲೈನ್
2009ರಲ್ಲೇ ಇದರ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಸುಮಾರು 3,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 450 ಕಿ.ಮೀ ಉದ್ದದ ಪೈಪ್‌ಲೈನ್ ಇದಾಗಿದ್ದು, ದಿನಕ್ಕೆ 12 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಅನಿಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಇದು ಕೊಚ್ಚಿಯಲ್ಲಿರುವ ದ್ರವೀಕೃತ ನೈಸರ್ಗಿಕ ಅನಿಲ ರಿ-ಗ್ಯಾಸಿಫಿಕೇಶನ್ ಟರ್ಮಿನಲ್‌ನಿಂದ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಜಿಲ್ಲೆಗಳ ಮೂಲಕ ದಕ್ಷಿಣ ಕನ್ನಡದ ಮಂಗಳೂರಿಗೆ ಅನಿಲವನ್ನು ಸಾಗಿಸುತ್ತದೆ.