ನವದೆಹಲಿ: ನಮ್ಮ ಭದ್ರತಾ ಪಡೆಗಳು ಮತ್ತೊಮ್ಮೆ ಅತ್ಯಂತ ಧೈರ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿವೆ. ಅವರ ಜಾಗರೂಕತೆಗೆ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಜಮ್ಮು ಮತ್ತು ಕಾಶ್ಮೀರದ ನಾಗ್ರೋಟದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರು ಹತರಾದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಇತರ ಉನ್ನತ ಅಧಿಕಾರಿಗಳು ಪರಿಶೀಲನಾ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಅವರು, ನಮ್ಮ ಭದ್ರತಾ ಪಡೆಗಳು ಮತ್ತೊಮ್ಮೆ ಅತ್ಯಂತ ಧೈರ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿವೆ. ಅವರ ಜಾಗರೂಕತೆಗೆ ಧನ್ಯವಾದಗಳು. ಜಮ್ಮು ಮತ್ತು ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವ ಆಯಾಮಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಕೆಟ್ಟ ಕಾರ್ಯಗಳನ್ನ ನಿಷ್ಫಲಗೊಳಿಸಿದ್ದಾರೆ ಎಂದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಇ-ಮೊಹಮ್ಮದ್‌ಗೆ ಸೇರಿದ 4 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಅವರ ಬಳಿ ಇದ್ದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ವಶಕ್ಕೆ ಪಡೆದಿದ್ದಾರೆ. ಮುಂದೆ ಸಂಭವಿಸಬಹುದಿದ್ದ ದೊಡ್ಡ ಹಾನಿ ಮತ್ತು ವಿನಾಶದ ಎಲ್ಲ ಪ್ರಯತ್ನಗಳನ್ನು ಮತ್ತೊಮ್ಮೆ ವಿಫಲಗೊಳಿಸಿದ್ದಾರೆ ಎಂದು ಭದ್ರತಾ ಪಡೆಗಳ ಕಾರ್ಯವೈಖರಿಯನ್ನು ಕೊಂಡಾಡಿದರು.
26/11 ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಭಯೋತ್ಪಾದಕರು ದೊಡ್ಡ ದಾಳಿಗೆ ಸಜ್ಜಾಗಿದ್ದಾರೆ ಎಂಬುದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಜಮ್ಮು ನಗರದ ಹೊರವಲಯದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ಭದ್ರತಾ ಪಡೆಗಳು ನಾಲ್ವರು ಶಂಕಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಹತ್ಯೆ ಮಾಡಿತು. ಅವರ ಬಳಿ ಇದ್ದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿತು.