ನವದೆಹಲಿ: ಕೋವಿಡ್-19 ಗೆ ಲಸಿಕೆ ಕಂಡುಹಿಡಿಯಲು ಶ್ರಮಿಸಿದ ವಿಜ್ಞಾನಿಗಳು ಹಾಗೂ ಸಂಶೋಧಕರ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದೊಂದು ನಿರ್ಣಾಯಕ ಘಟ್ಟವಾಗಿದೆ. ಆರೋಗ್ಯಶಾಲಿ ಮತ್ತು ಕೋವಿಡ್-19 ಮುಕ್ತ ಭಾರತಕ್ಕಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೊಟೆಕ್ ಕಂಪನಿಗಳು ನಡೆಸುತ್ತಿರುವ ಹೋರಾಟಕ್ಕೆ ಡಿಸಿಜಿಐ ಅನುಮೋದನೆ ನೀಡಿದ್ದು ಶ್ಲಾಘನೀಯ. ಭಾರತ ದೇಶಕ್ಕೆ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಮೋದಿ ಹೇಳಿದ್ದಾರೆ.
ಆತ್ಮನಿರ್ಭರ್ ಭಾರತದತ್ತ ಮಹತ್ವದ ಹೆಜ್ಜೆ:
ಸದ್ಯ ತುರ್ತು ಬಳಕೆಯ ಅನುಮೋದನೆ ಪಡೆದಿರುವ ಎರಡೂ ಲಸಿಕೆಗಳು ಭಾರತದಲ್ಲಿಯೇ ತಯಾರಾಗಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಕೈಜೋಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳ ಕಾರ್ಯ ಮೆಚ್ಚುವಂಥದು ಎಂದು ಮೋದಿ ಶ್ಲಾಘಿಸಿದ್ದಾರೆ.
ಕೊರೊನಾ ವಾರಿಯರ್ಸ್ಗಳಿಗೆ ಋಣಿ:
ನಮ್ಮ ವೈದ್ಯರು, ಇತರೆ ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೊಲೀಸ್ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು ಹಾಗೂ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಎಲ್ಲ ಕೊರೊನಾ ವಾರಿಯರ್ಗಳು ಪ್ರತಿಕೂಲ ಪರಿಸ್ಥಿತಿಗಳಲ್ಲೂ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅದೆಷ್ಟೋ ಜೀವಗಳನ್ನು ಉಳಿಸಿದ ಅವರಿಗೆ ನಾವು ಸದಾ ಋಣಿಯಾಗಿರುತ್ತೇವೆ ಎಂದು ಪ್ರಧಾನಿ ಮೋದಿ ಕೊರೊನಾ ವಾರಿಯರ್ಗಳ ಕಾರ್ಯವನ್ನು ಕೊಂಡಾಡಿದ್ದಾರೆ.