ದೆಹಲಿ: ಇಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರ‍್ಯಾಲಿ ನಡೆಸಲಿದ್ದಾರೆ.
ದರಿಯಾಗಂಜ್ ಬಳಿಯಿರುವ ರಾಮ್‌ಲೀಲಾ ಮೈದಾನದಲ್ಲಿ ಈ ಬೃಹತ್ ರ‍್ಯಾಲಿ ನಡೆಯಲಿದ್ದು, ಇದಕ್ಕೂ ಪೂರ್ವದಲ್ಲಿ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 11.30 ರ ಸುಮಾರಿಗೆ ಪ್ರಧಾನಿ ಮೆಗಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಹೋರಾಟದ ಬಗ್ಗೆ ಅವರು ಮಾತನಾಡುವ ನಿರೀಕ್ಷೆ ಇದೆ.
ಇನ್ನು, ಈ ಕಾರ್ಯಕ್ರಮಕ್ಕೆ ಉತ್ತರ ಭಾರತದಿಂದ ಸುಮಾರು ಎರಡು ಲಕ್ಷ ಮಂದಿ ಆಗಮಿಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಗಿ ಭದ್ರತೆ:
ಈ ರ‍್ಯಾಲಿಗೆ ಆಗಮಿಸುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಈ ಹಿನ್ನೆಲೆ ರಾಜಧಾನಿಗೆ ಆಗಮಿಸುವ ಪ್ರತಿ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ರಾಮ್‌ಲೀಲಾ ಮೈದಾನಕ್ಕೆ ಹೋಗುವ ಮಾರ್ಗದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗಾಗಿ ದೆಹಲಿ ಪೊಲೀಸರು ಎಸ್‌ಪಿಜಿ ಮತ್ತು ಬಿಜೆಪಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.
ದೆಹಲಿಯಲ್ಲಿರುವ ಅನಧಿಕೃತ 1,731 ಕಾಲೊನಿಗಳಲ್ಲಿರುವ ಸುಮಾರು 40 ಲಕ್ಷ ಜನರಿಗೆ ಪ್ರಧಾನಿಯವರು ಮಾಲೀಕತ್ವದ ಹಕ್ಕು ನೀಡಿರುವ ಹಿನ್ನಲೆಯಲ್ಲಿ ಅವರಿಗೆ ಧನ್ಯವಾದ ತಿಳಿಸುವ ಸಲುವಾಗಿ ಈ ಬೃಹತ್ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ನಾಯಕ ವಿಜಯ್ ಗೋಯಲ್ ತಿಳಿಸಿದ್ದಾರೆ.