ನವದೆಹಲಿ: ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ದ ವಾರ್ಷಿಕ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ 'ಬೆಳವಣಿಗೆಯನ್ನು ಮರಳಿ ಪಡೆಯುವುದು' (Getting Growth Back) ಎಂಬ ವಿಷಯ ಕುರಿತು ಮಂಗಳವಾರ ಮಾತನಾಡಲಿದ್ದಾರೆ.
1895 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು 125 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶದಲ್ಲಿ ವಿಧಿಸಿದ್ದ ಲಾಕ್ ಡೌನ್ ಕ್ರಮೇಣ ಸಡಿಲಿಕೆಗೊಂಡು ಕೈಗಾರಿಕೆಗಳು ತಮ್ಮ ಕಾರ್ಯಾಚರಣೆಯನ್ನು ಪುನಾರಂಭಗೊಳಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿಯವರ ಭಾಷಣ ಪ್ರಮುಖವೆನಿಸಿದೆ.
ಇಡೀ ದಿನ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಪಿರಮಾಲ್ ಗ್ರೂಪ್ ಅಧ್ಯಕ್ಷ ಅಜಯ್ ಪಿರಮಾಲ್, ಐಟಿಸಿ ಲಿಮಿಟೆಡ್ ಸಿಎಂಡಿ ಸಂಜೀವ್ ಪುರಿ, ಬಯೋಕಾನ್ ಸಿಎಂಡಿ ಕಿರಣ್ ಮಜುಮ್ದಾರ್-ಶಾ, ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್, ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಿಇಒ ಉದಯ್ ಕೊಟಕ್ ಮತ್ತು ಸಿಐಐ ಅಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಸೇರಿದಂತೆ ಘಟಾನುಘಟಿಗಳು ಭಾಗವಹಿಸಲಿದ್ದಾರೆ.