ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮಾತೆಮೆಲಾ ಸಿರಿಲ್ ರಾಮಾಫೋಸಾ ಅವರೊಂದಿಗೆ ಗುರುವಾರ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಮಾಹಿತಿ ಪ್ರಕಾರ, ಉಭಯ ನಾಯಕರು ಕೋವಿಡ್-19 ಸಾಂಕ್ರಾಮಿಕದಿಂದ ನಿರಂತರವಾಗಿ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದ್ದಾರೆ. ಜೊತಗೆ ಆಯಾ ದೇಶಗಳಲ್ಲಿ ಕೈಗೊಳ್ಳುತ್ತಿರುವ ವ್ಯಾಕ್ಸಿನೇಷನ್ ಅಭಿಯಾನದ ಬೆಳವಣಿಗೆಗಳ ಮಾಹಿತಿಯನ್ನು ಸಹ ಹಂಚಿಕೊಂಡರು.
ಈ ಸುದ್ದಿಯನ್ನೂ ಓದಿ: ಕೋವಿಡ್-19 ಲಸಿಕೆಯೊಂದಿಗೆ ನೋವು ನಿವಾರಕಗಳನ್ನು ತೆಗೆದುಕೊಳ್ಳಬಹುದೇ!?
ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಭಾರತದ ಉದ್ಪಾದಕ ಸಾಮರ್ಥ್ಯದ ಕುರಿತು ಚರ್ಚಿಸಿ, ಆಫ್ರಿಕಾ ಸೇರಿ ಎಲ್ಲಾ ದೇಶಗಳ ಅಗತ್ಯಗಳನ್ನು ಪೂರೈಸುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಲಸಿಕೆಗಳು ಎಲ್ಲರಿಗೂ ಕೈಗೆಟುಕುವಂತಾಗಬೇಕೆಂಬ ಉದ್ದೇಶದಿಂದ, ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸಹಯೋಗದ ಸಾಧ್ಯತೆಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಸಹಯೋಗದ ಪ್ರಯತ್ನಗಳ ಸಾಮರ್ಥ್ಯವನ್ನು ಬಲಪಡಿಸಲು ಮುಂಬರುವ ದಿನಗಳಲ್ಲಿ ಎರಡೂ ದೇಶಗಳ ಅಧಿಕಾರಿಗಳು ಸಂಪರ್ಕದಲ್ಲಿರುತ್ತಾರೆ ಎಂದು ನಾಯಕರು ಈ ವೇಳೆ ಒಪ್ಪಿಕೊಂಡಿದ್ದಾರೆ.