ನವದೆಹಲಿ: ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ವಿಶೇಷವಾಗಿ ಬಾಲಿವುಡ್ ನಟ-ನಟಿಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈಟಿವಿ ಭಾರತ ಪ್ರಸ್ತುತಪಡಿಸಿದ್ದ ಬಾಪು ಕುರಿತ 'ವೈಷ್ಣವ ಜನತೋ.. ತೆನೆ ರೆ ಕಹಿಯೇ.. ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಶನಿವಾರ ನವದೆಹಲಿಯ ಲೋಕ್ ಕಲ್ಯಾಣ ಮಾರ್ಗದಲ್ಲಿ ಬಾಲಿವುಡ್ ಸಿನಿತಾರೆಯರ ಸಮ್ಮುಖದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈಟಿವಿ ಭಾರತ ಗಾಂಧಿ ಜಯಂತಿಗೆ ಅರ್ಪಿಸಿದ್ದ ಮಹಾತ್ಮ ಗಾಂಧಿಯವರ ನೆಚ್ಚಿನ ಗೀತೆಯಾದ 'ವೈಷ್ಣವ ಜನತೋ' ಸೇರಿದಂತೆ ಒಟ್ಟು ನಾಲ್ಕು ಗೀತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.
ಇದೇ ಕಾರ್ಯಕ್ರಮದಲ್ಲಿ ಈನಾಡು ಪ್ರತಿನಿಧಿಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಪ್ರಧಾನಿ ಮೋದಿ,'ಷೈಷ್ಣವ ಜನತೋ' ಹಾಡಿನ ಹಿಂದಿರುವ ಎಲ್ಲರನ್ನು ಅಭಿನಂದಿಸಿದ್ದಾರೆ. ಸ್ವಚ್ಛ ಭಾರತ ಪರಿಕಲ್ಪನೆಗೆ ಈನಾಡು ಸಮೂಹದ ಕೊಡುಗೆಯನ್ನು ಮೋದಿ ಉಲ್ಲೇಖಿಸಿ ಪ್ರಶಂಸಿಸಿದ್ದಾರೆ. ಈನಾಡು ಸಮೂಹ ಸಂಸ್ಥೆಯ ಮುಖ್ಯಸ್ಥ ರಾಮೋಜಿ ರಾವ್ ಸಾಮಾಜಿಕ ಕಳಕಳಿಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಈಟಿವಿ ಭಾರತದ ವಿಡಿಯೋ ಜೊತೆಗೆ ಮಹಾತ್ಮ ಗಾಂಧಿ ಕುರಿತು ಬಾಲಿವುಡ್ ನಿರ್ದೇಶಕ ರಾಜಕುಮಾರ್ ಹಿರಾನಿ, ತಾರಕ್ ಮೆಹ್ತಾ ಗ್ರೂಪ್ ಹಾಗೂ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ನಿರ್ಮಿಸಿದ್ದ ಮಹಾತ್ಮ ಗಾಂಧಿ ಚಿಂತೆನೆಗಳನ್ನು ಸಾರುವ ಗೀತೆಗಳನ್ನು ವೀಕ್ಷಿಸಿ ಈಟಿವಿ ಭಾರತ್ ಸೇರಿದಂತೆ ಎಲ್ಲಾ ನಾಲ್ಕು ಸಂಸ್ಥೆಗಳಿಗೂ ಅಭಿನಂದನೆ ತಿಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನದ ವಿಶೇಷವಾಗಿ ಈಟಿವಿ ಭಾರತ ದೇಶದ ವಿವಿಧ ಭಾಷೆಯ ಮಹಾನ್ ಗಾಯಕರಿಂದ ವೈಷ್ಣವ ಜನತೋ ಗೀತೆಯನ್ನು ಹಾಡಿಸಿ ಅಕ್ಟೋಬರ್ 2ರಂದು ಲೋಕಾರ್ಪಣೆಗೊಳಿಸಿತ್ತು. ಈ ಗೀತೆಯನ್ನು ಕೇಳಿದ ಪ್ರಧಾನಿ ಸಹಿತ ದೇಶದ ಗಣ್ಯರು ಈಟಿವಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಗಾಂಧೀಜಿ ಚಿಂತನೆ ಸಾರುವ ದೃಶ್ಯರೂಪಕ ಬಿಡುಗಡೆ... ನಮೋ ಜೊತೆ ಬಾಲಿವುಡ್ ನಟ-ನಟಿಯರು ಭಾಗಿ!
ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಆಮೀರ್ ಖಾನ್, ರಾಜ್ಕುಮಾರ್ ಹಿರಾನಿ, ಕಂಗನಾ ರಣಾವತ್, ಆನಂದ್ ರೈ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸೋನಂ ಕಪೂರ್, ಜಾಕಿ ಶ್ರಾಫ್, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಬಾಲಿವುಡ್ನ ಎಲ್ಲಾ ಪ್ರಮುಖರು ಭಾಗಿಯಾಗಿದ್ದರು.