ನವದೆಹಲಿ: ಚೀನಾದಲ್ಲಿ ಈಗಾಗಲೇ 811 ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ನೆರವು ನೀಡಲು ಸಿದ್ಧವಿರುವುದಾಗಿ ಹಾಗೂ ಅಲ್ಲಿನ ಸಾವು-ನೋವುಗಳಿಗೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ಪತ್ರ ಬರೆದಿದ್ದಾರೆ.
ಚೀನಾದ ಹುಬೈ ಪ್ರಾಂತ್ಯದ ವುಹಾನ್ನಲ್ಲಿ ಮೊದಲು ಹುಟ್ಟಿಕೊಂಡ ಮಾರಣಾಂತಿಕ ಕೊರೊನಾ ವೈರಸ್ ಇದೀಗ ಭಾರತವು ಸೇರಿ ಪ್ರಪಂಚದ 24 ರಾಷ್ಟ್ರಗಳಿಗೆ ಕಾಲಿಟ್ಟಿದ್ದು, ವಿಶ್ವ ಆರೋಗ್ಯ ಸಂಸ್ಥೆ 'ಜಾಗತಿಕ ತುರ್ತು ಪರಿಸ್ಥಿತಿ' ಘೋಷಿಸಿದೆ. ಚೀನಾದಲ್ಲಿ ಈವರೆಗೆ ಒಟ್ಟು 37,198 ಪ್ರಕರಣಗಳು ದೃಢಪಟ್ಟಿರುವುದಾಗಿ ವರದಿಯಾಗಿದೆ.
ಚೀನಾದ ಪರಿಸ್ಥಿತಿಗೆ ಮರುಗಿರುವ ಪಿಎಂ ಮೋದಿ, ಅವಶ್ಯಕತೆ ಬಿದ್ದರೆ ಚೀನಾಗೆ ನೆರವು ನೀಡಲು ಭಾರತ ಸಿದ್ಧವಿರುವುದಾಗಿ ತಿಳಿಸಿ ಚೀನಾದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಪತ್ರದಲ್ಲಿ ಹುಬೈ ಪ್ರಾಂತ್ಯದಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರ ಮಾಡಲು ಸಹಕರಿಸಿದ ಚೀನಾದ ಸರ್ಕಾರಕ್ಕೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.