ನವದೆಹಲಿ: ದೇಶದ ಕೆಲವೊಂದು ರಾಜ್ಯಗಳಲ್ಲಿ ಮಹಾಮಾರಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದ್ದು, ಅಲ್ಲಿ ತೆಗೆದದುಕೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ಏಳು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು.
ಕರ್ನಾಟಕ, ಆಂಧ್ರಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ಪಂಜಾಬ್, ದೆಹಲಿ ಹಾಗೂ ಮಹಾರಾಷ್ಟ್ರ ಸಿಎಂಗಳು, ಆರೋಗ್ಯ ಸಚಿವರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ರೋಗ ಹರಡುವಿಕೆ ತಡೆಯಲು ರಾಜ್ಯಗಳು ಕೈಗೊಂಡಿರುವ ಪ್ರಯತ್ನಕ್ಕೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಏಳು ರಾಜ್ಯಗಳಲ್ಲಿ ಶೇ.63ಕ್ಕಿಂತಲೂ ಅಧಿಕ ಕೊರೊನಾ ಸೋಂಕಿತ ಪ್ರಕರಣಗಳಿದ್ದು,ಹೀಗಾಗಿ ಪ್ರಧಾನಿ ಮೋದಿ ಮಹತ್ವದ ಸೂಚನೆ ನೀಡಿದ್ದಾರೆ. ಮಾಸ್ಕ್ ಹಾಕಿಕೊಳ್ಳುವುದನ್ನ ಅಭ್ಯಾಸ ಮಾಡಿಕೊಳ್ಳುವುದು ಕಷ್ಟ. ಆದರೆ ನಾವು ಅದನ್ನ ನಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳದಿದ್ದರೆ ನಮಗೆ ಬೇಕಾದ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಕೋವಿಡ್ ವಿರುದ್ಧ ಹೋರಾಟ ನಡೆಸಲು ಪರಿಣಾಮಕಾರಿ ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ, ಸ್ಪಷ್ಟ ಸಂದೇಶ ನೀಡುವುದರಿಂದ ಕೊರೊನಾ ತಡೆಗಟ್ಟಬಹುದು ಎಂದು ನಮೋ ಹೇಳಿದ್ದಾರೆ. ಕೋವಿಡ್-19 ಹರಡುವಿಕೆ ತಡೆಗಟ್ಟಲು ಎನ್ಡಿಆರ್ಎಪ್ ಮೊತ್ತದ ಶೇ.50ರಷ್ಟು ಖರ್ಚು ಮಾಡಬಹುದು ಎಂದು ನಮೋ ಘೋಷಣೆ ಮಾಡಿದ್ದಾರೆ.
ಕಷ್ಟದ ಸಮಯದಲ್ಲೂ ವಿಶ್ವದಾದ್ಯಂತ ಔಷಧಿ ಪೂರೈಕೆ ಮಾಡುತ್ತಿದ್ದು, ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸುಲಭವಾಗಿ ಔಷಧಿ ತಲುಪಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ 700 ಜಿಲ್ಲೆಗಳಿವೆ. ಆದರೆ 7 ರಾಜ್ಯದ 60 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಮಿತಿಮೀರಿದ್ದು ಎಲ್ಲರೂ ಚಿಂತೆಗೊಳಗಾಗುವಂತೆ ಮಾಡಿದೆ. ಈ ಜಿಲ್ಲೆಗಳ ಜತೆ ಮುಖ್ಯಮಂತ್ರಿಗಳು ನಿರಂತರ ಸಂಪರ್ಕವನ್ನಿಟ್ಟುಕೊಂಡು ಹತೋಟಿಗೆ ತೆಗೆದುಕೊಂಡು ಬರಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.