ಪಾಟ್ನಾ: ಬಿಹಾರ ರಾಜ್ಯದ ಪ್ರತಿಯೊಂದು ಮನೆ ಮನೆಗೂ ಕಳೆದ ಒಂದು ದಶಕದಲ್ಲಿ, ವಿದ್ಯುತ್ ಮತ್ತು ಅನಿಲ ಸಂಪರ್ಕವನ್ನು ಕಲ್ಪಿಸಲಾಗಿದೆ. ಇದೀಗ ಮುಂದಿನ ಒಂದು ದಶಕದವರೆಗೆ ಬಿಹಾರದ ಜನರ ಹೆಚ್ಚಿನ ಆಕಾಂಕ್ಷೆಗಳನ್ನು ಈಡೇರಿಸುವ ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಹಾರದ ಅರೇರಿಯಾ ಜಿಲ್ಲೆಯ ಫೋರ್ಬೆಸ್‌ಗಂಜ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಜನರನ್ನು ಹೆಚ್ಚು ದಿನ ಮೋಸಗೊಳಿಸಲು ಸಾಧ್ಯವಿಲ್ಲ. ಮತದಾರ ಕಾಂಗ್ರೆಸ್ ಪಕ್ಷವನ್ನು ಯಾವ ಸ್ಥಿತಿಗೆ ತಂದಿದ್ದಾನೆ ಎಂದು ನೋಡಿ ಎಂದು ಹೇಳಿದರು.
ಇಂದು ಅವರಿಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಟ್ಟು 100 ಸಂಸದರು ಇಲ್ಲ. ಅವಕಾಶ ಸಿಕ್ಕಾಗಲೆಲ್ಲ ಜನರು ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸುತ್ತಿದ್ದಾರೆ ಎಂದು ಕೈ ಪಡೆಯ ವಿರುದ್ಧ ಹರಿಹಾಯ್ದರು.
ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಹೆಚ್ಚುವರಿ ಸಿದ್ಧತೆ ಹಾಗೂ ಮುನ್ನೆಚ್ಚರಿಕೆಗಳೊಂದಿಗೆ ಚುನಾವಣೆಗಳನ್ನು ನಡೆಸುತ್ತಿರುವುದಕ್ಕಾಗಿ ಚುನಾವಣಾ ಆಯೋಗವನ್ನು ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಇನ್ನು ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ 54 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ಮತದಾನ ಪ್ರಗತಿಯಲ್ಲಿದೆ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನರೇಂದ್ರ ಮೋದಿಯವರು ಮನವಿ ಮಾಡಿದ್ದು, ಪ್ರಜಾಪ್ರಭುತ್ವದ ಈ ಉತ್ಸವವನ್ನು ಮತ್ತಷ್ಟು ಬಲಪಡಿಸುವಂತೆ ಕೋರಿದ್ದಾರೆ.