ನವದೆಹಲಿ: ಕೃಷಿ ಮೂಲಸೌಕರ್ಯ ನಿಧಿಯಿಂದ 1 ಲಕ್ಷ ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನವನ್ನಾಗಿ ಬಿಡುಗಡೆ ಮಾಡಲಾಗಿದೆ. ಇದು ಗ್ರಾಮಾಂತರ ಪ್ರದೇಶಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಸೃಷ್ಟಿಸುವುದರ ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನು ಹುಟ್ಟುಹಾಕುತ್ತದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ ಆರನೇ ಕಂತಿನ ಅನುದಾನ ಒಂದು ಲಕ್ಷ ಕೋಟಿ ರೂ.ಗಳ ವಿಶೇಷ ನಿಧಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಇದರಿಂದ ಹಳ್ಳಿಗಳಲ್ಲಿ ಉತ್ತಮ ಗೋದಾಮು ಮಳಿಗೆಗಳನ್ನು ನಿರ್ಮಿಸಲು ಸಹಕಾರಿಯಾಗುತ್ತದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜತೆಗೆ ರೈತ ಗುಂಪುಗಳಿಗೆ ಸಹಾಯ ಮಾಡುತ್ತದೆ ಭರವಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪ್ರತಿ ಜಿಲ್ಲೆಯ ಪ್ರಸಿದ್ಧ ಉತ್ಪನ್ನಗಳನ್ನು ದೇಶ ಮತ್ತು ವಿಶ್ವದ ಮಾರುಕಟ್ಟೆಯ ಅಡಿಯಲ್ಲಿ ತಂದು ಸ್ವಾವಲಂಬಿ ಭಾರತಕ್ಕೆ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ಮುಂಬರುವ ವರ್ಷಗಳಲ್ಲಿ 10 ಸಾವಿರ ರೈತ ಉತ್ಪಾದನಾ ಸಂಸ್ಥೆಗಳನ್ನು ರಚಿಸಲು ಒತ್ತು ನೀಡಿ, ಕೃಷಿ ಆಧಾರಿತ ಕೈಗಾರಿಕೆಗಳಿಗೆ ಬೆಂಬಲ ನೀಡಲಾಗುತ್ತದೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿಯನ್ನು ಆಹಾರ ಸಂಸ್ಕರಣೆ, ಕೃಷಿ ಉಪಕರಣಗಳ ತಯಾರಿಕೆ ಮುಂತಾದ ಉದ್ಯಮಗಳಿಗೆ ಬಳಸಲಾಗುತ್ತಿದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.
ಇಂದು ಒಂದೇ ದಿನ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 17 ಸಾವಿರ ಕೋಟಿ ರೂಪಾಯಿಗಳನ್ನು ಇಂದು ಒಂದೇ ಕ್ಲಿಕ್‌ನಲ್ಲಿ 8.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಯಾವುದೇ ಮಧ್ಯವರ್ತಿಗಳಿಲ್ಲದೇ ಜಮಾ ಮಾಡಲಾಗಿದೆ. ಯೋಜನೆಯ ಉದ್ದೇಶ ಈಡೇರುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದಿರುವ ಪ್ರಧಾನಿ, ಕಳೆದ ಒಂದೂವರೆ ವರ್ಷದಲ್ಲಿ 75,000 ಕೋಟಿ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗಿದೆ. ಈ ಪೈಕಿ 22 ಸಾವಿರ ಕೋಟಿ ರೂ.ಗಳನ್ನು ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ವರ್ಗಾಯಿಸಲಾಗಿದೆ ಎಂದು ವಿವರಿಸಿದರು.