ಚೆನ್ನೈ: ಕಳೆದ 15 ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಹುಭಾಷಾ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

74 ವರ್ಷದ ಎಸ್‌ಪಿಬಿ ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ ಕಾರಣ ಆಗಸ್ಟ್ 13ರಿಂದ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನುರಿತ ತಜ್ಞ ವೈದ್ಯರಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎಕ್ಮೋ ಮಷಿನ್, ವೆಂಟಿಲೇಟರ್ನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದಿರುವ ಆಸ್ಪತ್ರೆ ಆಡಳಿತ ಮಂಡಳಿ, ಎಸ್‌ಪಿಬಿ ಆರೋಗ್ಯದಲ್ಲಿನ ಸ್ಥಿತಿಗತಿ ಬಗ್ಗೆ ಕುಟುಂಬಸ್ಥರಿಗೆ ಮೇಲಿಂದ ಮೇಲೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಎಸ್‌ಪಿಬಿ ಚೇತರಿಕೆಗಾಗಿ ಚಿತ್ರ ಕಲಾವಿದರು, ನಟರು, ಖ್ಯಾತ ಗಾಯಕರು ನಿನ್ನೆ ದೇಶಾದ್ಯಂತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.