ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಕಂಡು ಹಿಡಿಯಲಾಗಿರುವ ಲಸಿಕೆಯ ಮೊದಲ ಹಂತದ ಮಾನವ ಪ್ರಯೋಗ ಈಗಾಗಲೇ ಆರಂಭಗೊಂಡಿದ್ದು, ಮುಂದಿನ ಮೂರು ತಿಂಗಳಲ್ಲಿ ಇದರ ಫಲಿತಾಂಶ ಹೊರಬರಲಿದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲ್ರಿಯಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕೊರೊನಾ ವಿರುದ್ಧದ ಲಸಿಕೆ ಕೊವ್ಯಾಕ್ಸಿನ್ ಮಾನವ ಪ್ರಯೋಗದ ಮೊದಲ ಹಂತ ಇಂದಿನಿಂದ ದೇಶಾದ್ಯಂತ ಆರಂಭಗೊಂಡಿದ್ದು, ಇದರ ಫಲಿತಾಂಶ ಮುಂದಿನ ಮೂರು ತಿಂಗಳಲ್ಲಿ ಹೊರಬೀಳಲಿದೆ ಎಂದಿದ್ದಾರೆ. ಹೊಸ ಲಸಿಕೆ ಕಂಡು ಹಿಡಿಯುವುದು ಅತಿ ದೊಡ್ಡ ಕೆಲಸವಾಗಿದ್ದು, ಬೇರೆ ದೇಶದಲ್ಲೂ ಕೊರೊನಾ ಲಸಿಕೆ ಉತ್ಪಾದನೆಯಾದರೂ ನಾವೂ ಕೂಡ ಹೆಚ್ಚಿನ ಮಟ್ಟದಲ್ಲಿ ತಯಾರು ಮಾಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ತಿಳಿಸಿದರು.
ಮಾನವ ಪ್ರಯೋಗಕ್ಕಾಗಿ 12 ಸಂಸ್ಥೆಗಳಲ್ಲಿ 1,125 ಜನರ ಆಯ್ಕೆ ಮಾಡಲಾಗಿದ್ದು, ಮೊದಲ ಹಂತದಲ್ಲಿ 18-55 ವಯಸ್ಸಿನ 375 ಜನರ ಮೇಲೆ ಪ್ರಯೋಗ ನಡೆಸಲಾಗಿದೆ ಎಂದರು. ಎರಡನೇ ಹಂತದಲ್ಲಿ 12-65 ವಯಸ್ಸಿನ 750 ಜನರ ಮೇಲೆ ಹಾಗೂ 3ನೇ ಹಂತದ ಪ್ರಯೋಗ ಅತಿ ಹೆಚ್ಚು ಜನರ ಮೇಲೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮಹಿಳೆ ಹಾಗೂ ಪುರುಷರ ಮೇಲೆ ಪ್ರಯೋಗ ನಡೆಸಲಾಗುತ್ತಿದ್ದು, ಗರ್ಭಿಣಿಯರಿಗೆ ಇದರಲ್ಲಿ ಸೇರಿಸಿಕೊಂಡಿಲ್ಲ ಎಂದು ತಿಳಿಸಿದರು.