ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಜಾ ಮಾಡಿದೆ.
ದೆಹಲಿಯ ಜೈ ಭಗವಾನ್ ಗೋಯೆಲ್ ಹಾಗೂ ಚಂದರ್ ಪ್ರಕಾಶ್ ತ್ಯಾಗಿ ಎಂಬುವವರು ರಾಹುಲ್ ಪೌರತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು. ರಾಹುಲ್ ಬ್ರಿಟಿಷ್ ಪ್ರಜೆಯೇ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು. ಆ ಮೂಲಕ ಅವರು ಚುನಾವಣೆಗೆ ಸ್ಪರ್ಧಿಸಲು, ಸಂಸತ್ತಿನ ಸ್ಥಾನ ಪಡೆಯಲು ಅರ್ಹರೇ ಎಂಬುದನ್ನು ನಿರ್ಧರಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ಯಾವುದೋ ಕಂಪನಿ ರಾಹುಲ್ರನ್ನು ಬ್ರಿಟಿಷ್ ಎಂದ ಮಾತ್ರಕ್ಕೆ ಅವರು ಬ್ರಿಟನ್ ಪ್ರಜೆಯಾಗಿಬಿಡುತ್ತಾರೆಯೇ ಎಂದು ಪ್ರಶ್ನಿಸಿದೆ.
ಮಾಜಿ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ವಾರಣಾಸಿ ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ರದ್ದು ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ವಜಾ ಮಾಡಿದೆ. ಈ ಅರ್ಜಿಯನ್ನು ಪರಿಗಣಿಸಲಾಗದು ಎಂದು ಸಿಜೆಐ ಗೊಗೊಯಿ ಅಭಿಪ್ರಾಯಪಟ್ಟರು.