ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುವ ಕಸರತ್ತು ದಿನದಿಂದ ದಿನಕ್ಕೆ ಮತ್ತಷ್ಟು ಕಗ್ಗಂಟಾಗುತ್ತಿದೆ. ಇದೀಗ ಎನ್ಸಿಪಿ+ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಶಿವಸೇನೆ ಕನಸು ನುಚ್ಚು ನೂರಾಗಿದೆ.
ಶಿವಸೇನೆ ಜತೆಗಿನ 50:50 ಸೂತ್ರದ ಒಪ್ಪಂದಕ್ಕೆ ಬಿಜೆಪಿ ಹಿಂದೇಟು ಹಾಕುತ್ತಿರುವ ಕಾರಣ, ಉದ್ಧವ್ ಠಾಕ್ರೆ ಸರ್ಕಾರ ರಚನೆ ಮಾಡುವ ಉದ್ಧೇಶದಿಂದ ನಿನ್ನೆ ಎನ್ಸಿಪಿ ಮುಖಂಡ ಶರದ್ ಪವಾರ್ ಜತೆ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಮಾತನಾಡಿರುವ ಪವಾರ್, ನಮಗೆ ಜನಾದೇಶ ಬಂದಿರುವುದು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಹೀಗಾಗಿ ನಾವು ಅದೇ ಕೆಲಸ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ನಿನ್ನೆ ಶರದ್ ಪವಾರ್ ಜತೆ ಉದ್ಧವ್ ಮಾತುಕತೆ ನಡೆಸುತ್ತಿದ್ದಂತೆ ಸರ್ಕಾರ ರಚನೆ ಮಾಡಲು ಕಾಂಗ್ರೆಸ್+ಎನ್ಸಿಪಿ ಮೈತ್ರಿ ಶಿವಸೇನೆಗೆ ಸಪೋರ್ಟ್ ಮಾಡಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದವು. ಆದರೆ ಇದೀಗ ಅದು ಸುಳ್ಳಾಗಿದ್ದು, ಬಿಜೆಪಿ ಜತೆ ಯಾವ ರೀತಿಯಲ್ಲಿ ಶಿವಸೇನೆ ಮೈತ್ರಿ ಮಾಡಿಕೊಳ್ಳಲಿದೆ ಎಂಬುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ನಾವು ಶಿವಸೇನೆ ಜತೆ 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ರೂ ಪರವಾಗಿಲ್ಲ ಎಂದಿದೆ.
288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ+ಶಿವಸೇನೆ(105+56) ಒಟ್ಟಿಗೆ ಸ್ಪರ್ಧೆ ಮಾಡಿದ್ರೆ, ಅದೇ ರೀತಿಯಲ್ಲಿ ಕಾಂಗ್ರೆಸ್+ಎನ್ಸಿಪಿ(54+44) ಸೇರಿ ಸ್ಪರ್ಧೆ ಮಾಡಿದ್ದವು.