ರಾಜಮಂಡ್ರಿ: ರಾಜಕೀಯ ಅಖಾಡಕ್ಕಿಳಿದು ಆಂಧ್ರಪ್ರದೇಶದಲ್ಲಿ ತಮ್ಮದೇ ಪ್ರಭಾವಳಿ ಸೃಷ್ಟಿಸಿರುವ ನಟ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ಬಂಪರ್ ಆಫರ್ ಘೋಷಿಸಿದ್ದಾರೆ.
ಆಂಧ್ರಪ್ರದೇಶದಾದ್ಯಂತ ಚುನಾವಣಾ ಪ್ರಚಾರ ಆರಂಭಿಸಿರುವ ಪವನ್ ಕಲ್ಯಾಣ್, ವೃದ್ಧ ರೈತರಿಗೆ ಐದು ಸಾವಿರ ಪಿಂಚಣಿ, ಉಚಿತ ಶಿಕ್ಷಣ ಹಾಗೂ ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದಾರೆ.
ನಿನ್ನೆ ರಾಜಮಂಡ್ರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾರಿ ಭರವಸೆಗಳನ್ನು ಅವರು ನೀಡಿದರು. ರೈತರಿಗೆ ವರ್ಷಕ್ಕೆ 8 ಸಾವಿರ ಹೂಡಿಕೆ ಬೆಂಬಲ, 60 ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ 5 ಸಾವಿರ ಪಿಂಚಣಿ, ಸೋಲಾರ್ ಮೋಟಾರ್ ವಿತರಣೆಯಂತಹ ಭರವಸೆ ನೀಡಿದರು. ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಾಗಿ ಹೇಳಿದರು.
ಕಿಂಡರ್ಗಾರ್ಡನ್ಯಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ, ಅಧಿಕಾರಕ್ಕೆ ಬಂದ 6 ತಿಂಗಳೊಳಗೆ 1 ಲಕ್ಷ ಹಾಗೂ ಒಟ್ಟಾರೆ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದರು. ಪ್ರತಿ ಕುಟುಂಬಕ್ಕೆ 10 ಲಕ್ಷ ವಿಮಾ ಸೌಭ್ಯ, ಶುದ್ಧ ಕುಡಿಯುವ ನೀರು, ಹಿಂದುಳಿದ ವರ್ಗಗಳಿಗೆ ಶೇ5ರಷ್ಟು ಮೀಸಲಾತಿ, ಮೀನುಗಾರರಿಗೆ ವಿಶೇಷ ಬ್ಯಾಂಕ್, ಮಹಿಳೆಯರಿಗೆ ಶಾಸಕಾಂಗದಲ್ಲಿ ಶೇ 33ರಷ್ಟು ಮೀಸಲಾತಿ, ಮುಸ್ಲಿಂ ಸಮುದಾಯದವರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡುವುದಾಗಿ ಘೋಷಿಸಿದರು.