ಪಾಟ್ನಾ(ಬಿಹಾರ್): ಮಾಡರ್ನ್ ಉಡುಪು ಧರಿಸಲು ಮತ್ತು ಮದ್ಯ ಸೇವಿಸಲು ನಿರಾಕರಿಸಿದ ಪತ್ನಿಗೆ ವ್ಯಕ್ತಿವೋರ್ವ ತ್ರಿವಳಿ ತಲಾಖ್ ನೀಡಿರುವ ವಿಚಿತ್ರ ಪ್ರಕರಣ ಬಿಹಾರದಲ್ಲಿ ಬೆಳಕಿಗೆ ಬಂದಿದೆ.
'ಬಳಕುವ ಬಳ್ಳಿಯಂತಿರು, ಅರೆಬರೆ ಬಟ್ಟೆ ಧರಿಸು, ಮದ್ಯ ಸೇವಿಸು ಎಂದು ನನ್ನ ಪತಿ ಆಗಾಗ ಪೀಡಿಸುತ್ತಿದ್ದ. ಇದನ್ನು ನಿರಾಕರಿಸಿದ್ದಕ್ಕೆ ತಲಾಖ್ ನೀಡಿದ್ದಾನೆ. 2015ರಲ್ಲಿ ಇಮ್ರಾನ್ ಮುಸ್ತಫಾ ಅವರನ್ನು ಮದುವೆಯಾದೆ. ಮದುವೆ ಆದ ಕೆಲ ದಿನಗಳ ನಂತರ ದೆಹಲಿಗೆ ತೆರಳಿದ್ದೆವು. ಕೆಲವು ತಿಂಗಳುಗಳ ನಂತರ ನಗರದ ಆಧುನಿಕ ಹುಡುಗಿಯರಂತೆ ಇರಬೇಕೆಂದು ನನ್ನನ್ನು ಒತ್ತಾಯಿಸುತ್ತಿದ್ದ. ನಾನು ಸಣ್ಣ ಉಡುಪುಗಳನ್ನು ಧರಿಸಿ ರಾತ್ರಿ ಪಾರ್ಟಿಗಳಿಗೆ ಹೋಗಿ ಮದ್ಯ ಸೇವಿಸಬೇಕೆಂದು ಆತ ಬಯಸುತ್ತಿದ್ದ. ಇವುಗಳನ್ನು ಮಾಡಲು ನಿರಾಕರಿಸಿದಾಗ ಪ್ರತಿದಿನ ಹೊಡೆಯುತ್ತಿದ್ದ ಎಂದು ಸಂತ್ರಸ್ತ ಮಹಿಳೆ ನೂರಿ ಫಾತ್ಮಾ ದೂರಿದ್ದಾರೆ.
ಸಣ್ಣ-ಸಣ್ಣ ವಿಷಯಗಳಿಗೆ ಗಂಡ ಚಿತ್ರಹಿಂಸೆ ನೀಡುತ್ತಿದ್ದ. ಕೆಲವು ದಿನಗಳ ಹಿಂದೆ ಮನೆಯಿಂದ ಹೊರಹೋಗುವಂತೆ ನನ್ನನ್ನು ಥಳಿಸಿದ್ದ. ಹೊರಹೋಗಲು ನಿರಾಕರಿಸಿದಾಗ ನನಗೆ ತ್ರಿವಳಿ ತಲಾಖ್ ಕೊಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸಂತ್ರಸ್ತೆಯು ಸದ್ಯ ರಾಜ್ಯ ಮಹಿಳಾ ಆಯೋಗದ ಕದ ತಟ್ಟಿದ್ದಾರೆ. ಆಯೋಗವು ತಲಾಖ್ ನೀಡಿದ ಇಮ್ರಾನ್ ಮುಸ್ತಫಾಗೆ ನೋಟಿಸ್ ಕಳುಹಿಸಿದೆ.