ನವದೆಹಲಿ: ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಜನರಿಗೆ ಮನವಿ ಮಾಡಿದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ದಿನನಿತ್ಯದ ಕಚೇರಿ ಬಳಕೆಗಾಗಿ ಯಾವುದೇ ಚೀನಾದ ಉತ್ಪನ್ನಗಳನ್ನು ಖರೀದಿಸದಂತೆ ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಇಂಥ ಹೇಳಿಕೆ ನೀಡಿದ್ದಾರೆ. ಎಲ್ಲಾ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಮನವಿ ಮಾಡಲು ಬಯಸುತ್ತೇನೆ. ಅಲ್ಲದೆ ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಕೇಂದ್ರವು ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಗುಣಮಟ್ಟದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತದೆ ಎಂದಿದ್ದಾರೆ.
ಚೀನಾದ ಕಡಿಮೆ ಗುಣಮಟ್ಟದ ಉತ್ಪನ್ನಗಳಾದ ದೀಪಗಳು ಮತ್ತು ಪೀಠೋಪಕರಣಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ರೂಪಿಸಿದ ಗುಣಮಟ್ಟದ ನಿಯಮಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರುತ್ತದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಬಿಐಎಸ್ ಇದುವರೆಗೆ ವಿವಿಧ ಉತ್ಪನ್ನಗಳಿಗೆ 25 ಸಾವಿರ ಗುಣಮಟ್ಟದ ನಿಯಮಗಳನ್ನು ರೂಪಿಸಿದೆ. ನಮ್ಮ ಸರಕುಗಳು ವಿದೇಶಕ್ಕೆ ತಲುಪಿದಾಗ, ಅವುಗಳನ್ನು ಪರಿಶೀಲಿಸಲಾಗುತ್ತದೆ. ನಮ್ಮ ಬಾಸ್ಮತಿ ಅಕ್ಕಿ ರಫ್ತು ತಿರಸ್ಕರಿಸಲ್ಪಟ್ಟಿದೆ. ಆದರೆ ಅವರ ಸರಕುಗಳು ಭಾರತಕ್ಕೆ ಬಂದಾಗ, ಕಟ್ಟುನಿಟ್ಟಾದ ಗುಣಮಟ್ಟದ ನಿಯಂತ್ರಣವಿಲ್ಲ ಎಂದು ಸಚಿವರು ಹೇಳಿದ್ದಾರೆ.
2016 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಹೊಸ ಬಿಐಎಸ್ ಕಾನೂನು, ಭಾರತೀಯ ಮಾನದಂಡಗಳಿಗೆ ಕಡ್ಡಾಯ ಅಥವಾ ಸ್ವಯಂಪ್ರೇರಿತ ಅನುಸರಣೆಯ ಮೂಲಕ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟ ಉತ್ತೇಜಿಸಲು ಕೇಂದ್ರ ಮತ್ತು ಬಿಐಎಸ್‌ಗೆ ಅಧಿಕಾರ ನೀಡುತ್ತದೆ ಎಂದಿದ್ದಾರೆ.