ಮುಂಬೈ : ವೈದ್ಯರ ಮೇಲಿನ ದೌರ್ಜನ್ಯ ವಿರೋಧಿಸಿ ಓರ್ವ ವ್ಯಕ್ತಿ ಮ್ಯಾರಥಾನ್ನಲ್ಲಿ ವಿಶಿಷ್ಟವಾಗಿ ಭಾಗವಹಿಸಿ ಗಮನ ಸೆಳೆದ ಘಟನೆ ಮುಂಬೈನಲ್ಲಿ ನಡೆದಿದೆ. ನಗರದಲ್ಲಿ ಆಯೋಜಿಸಲಾಗಿದ್ದ ಟಾಟಾ ಮ್ಯಾರಥಾನ್ನ 17ನೇ ಆವೃತ್ತಿಯಲ್ಲಿ ಭಾಗವಹಿಸಿದ ಈ ವ್ಯಕ್ತಿ ಅಭಿಜಿತ್ ಪ್ರಭು ಎಂಬಾತ ಹಲ್ಲೆಗೊಳಗಾದ ವೈದ್ಯನ ವೇಷ ಧರಿಸಿ ಮ್ಯಾರಥಾನ್ನಲ್ಲಿ ಭಾಗಿಯಾಗಿದ್ದಾನೆ. ಈ ಮೂಲಕ ವಿಭಿನ್ನ ರೀತಿಯಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ವಿರೋಧಿಸಿದ್ದಾನೆ. ಜೊತೆಗೆ ವೈದ್ಯರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾನೆ.
''ನಾನೊಬ್ಬ ವೈದ್ಯ, ಎಲ್ಲರಂತೆಯೇ ಒಬ್ಬ ಮನುಷ್ಯ, ದೇವರಲ್ಲ. ಜೀವಗಳನ್ನು ಉಳಿಸಲು ನಾನು ಪ್ರತಿಜ್ಞೆ ಕೈಗೊಂಡಿದ್ದೇನೆ ನನ್ನ ಕೈಲಾದ ಪ್ರಯತ್ನವನ್ನು ನಾನು ಮಾಡುತ್ತೇನೆ'' ಎಂಬ ಮೂಲಕ ಅಭಿಜಿತ್ ಸಾಮಾಜಿಕ ಸಂದೇಶವನ್ನು ಸಾರಿದ್ದಾನೆ. ಜೊತೆಗೆ ''ಕಳೆದ ಬಾರಿ ಕ್ಯಾನ್ಸರ್ ರೋಗಿಯ ಉಡುಪು ಧರಿಸಿ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದೆ. ಅದಕ್ಕೂ ಮೊದಲು ರಕ್ತದಾನಿಯಾಗಿ ಪಾಲ್ಗೊಂಡಿದ್ದೆ'' ಎಂದು ತಮ್ಮ ಸಾಮಾಜಿಕ ಕಳಕಳಿಯನ್ನು ಮ್ಯಾರಥಾನ್ ನಂತರ ಬಿಚ್ಚಿಟ್ಟಿದ್ದಾರೆ.
ಕಳೆದ ವರ್ಷ ಜೂನ್ 11ರಂದು ಕೋಲ್ಕತ್ತಾದ ಎನ್ಆರ್ಎಸ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಓರ್ವ ರೋಗಿ ಮರಣಹೊಂದಿದ ಕಾರಣಕ್ಕೆ ಕಿರಿಯ ವೈದ್ಯರ ಮೇಲೆ ಮೃತನ ಸಂಬಂಧಿಗಳು ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ವೈದ್ಯರು ತೀವ್ರವಾಗಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ವೈದ್ಯರಿಗೆ ಅಗತ್ಯ ರಕ್ಷಣೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅಭಿಜಿತ್ ಪ್ರಭು ಈ ಬಾರಿಯ ಮ್ಯಾರಥಾನ್ನಲ್ಲಿ ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ.
ಈ ಮ್ಯಾರಥಾನ್ನಲ್ಲಿ ಅಭಿಜಿತ್ ಪ್ರಭು ಮಾತ್ರವಲ್ಲ. ಇನ್ನೂ ಅನೇಕ ಮಂದಿ ಸಾಮಾಜಿಕ ಸಂದೇಶಗಳನ್ನು ಸಾರಲು ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.