ನವದೆಹಲಿ: ಇಂದಿನಿಂದ ಸಂಸತ್ನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಡಿಸೆಂಬರ್ 13ರವರೆಗೆ ಕಲಾಪಗಳು ನಡೆಯಲಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಎರಡನೇ ಅಧಿವೇಶನ ಇದಾಗಿದ್ದು, ಪೌರತ್ವ(ತಿದ್ದುಪಡಿ) ಮಸೂದೆ ಸೇರಿದಂತೆ ಇತರ ಪ್ರಮುಖ ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ.
2014 ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ಬಂದಿರುವ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಉದ್ದೇಶದಿಂದ ಬಿಜೆಪಿ ಸದನದಲ್ಲಿ ಅಂಗೀಕರಿಸಲು ಯೋಜಿಸಿರುವ ಪೌರತ್ವ ಮಸೂದೆಯು ಇಂದು ಸದನದಲ್ಲಿ ಚರ್ಚೆಗೆ ಬರಲಿದೆ.
ಇನ್ನು, ಅಧಿವೇಶನದಲ್ಲಿ ಇತರ ಪ್ರಮುಖ ಮಸೂದೆಗಳಾದ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2019, ಅ್ಯಂಟಿ ಮ್ಯಾರಿಟೈಮ್ ಪೈರಸಿ ಬಿಲ್ 2019 ಮತ್ತು ಟ್ರಾನ್ಸ್ಜೆಂಡರ್ ಪರ್ಸನ್ಸ್ (ಹಕ್ಕುಗಳ ರಕ್ಷಣೆ) ಮಸೂದೆ 2019ಗಳು ಮಂಡನೆಯಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ನಿನ್ನೆಯಷ್ಟೇ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸರ್ವಪಕ್ಷಗಳ ಸಭೆ ಕರೆದು ಸುಗಮ ಕಲಾಪಕ್ಕೆ ಮನವಿ ಮಾಡಿದ್ದಾರೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.