ನವದೆಹಲಿ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತಮ್ಮ ದೇಶವನ್ನು ಮಹಾಶಕ್ತಿಯನ್ನಾಗಿ ಮಾಡುವ ಸನ್ನಾಹದಲ್ಲಿ ಇದ್ದಾರೆ. ಚೀನಾದ ಆರ್ಥಿಕ ಪ್ರಗತಿ ಸಹ ಅದ್ಭುತವಾಗಿದ್ದು ಈಗ ಬಹುತೇಕ ದೇಶಗಳು ಚೀನಾದ ಉತ್ಪನ್ನಗಳ ಮೇಲೆ ಅವಲಂಬಿತವಾಗಿವೆ. ವಿಶ್ವದ ಹಲವಾರು ಸ್ಥಾಪಿತ ಹಣಕಾಸು ವ್ಯವಸ್ಥೆಗಳನ್ನು ದಾಟಿರುವ ಅದು ಜಗತ್ತಿನ 2ನೇ ಅತಿದೊಡ್ಡ ಆರ್ಥಿಕತೆ ಎನಿಸಿದೆ.
ಜಿನ್‌ಪಿಂಗ್ ಕನಸಿನ ಯೋಜನೆ ಎನಿಸಿಕೊಂಡ ಆಫ್ರಿಕಾ, ಯುರೋಪ್, ಮಧ್ಯಪ್ರಾಚ್ಯ ಮತ್ತು ಅಮೆರಿಕ ನಡುವೆ ಸಂಪರ್ಕ ಕಲ್ಪಿಸುವ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ಗೆ (ಬಿಆರ್ಐ) ಸೇರ್ಪಡೆಯಾಗಲು ಭಾರತ ನಿರಾಕರಿಸಿತ್ತು. ಇದರಿಂದ ಚೀನಾ ಭಾರತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ವಿಸ್ತರಣಾವಾದಿ ದೇಶ ಎಂದು ಬಿಂಬಿತವಾಗಿರುವ ಚೀನಾ ಬಿಆರ್ಐ ಮೂಲಕ ತನ್ನ ಪ್ರಭಾವವನ್ನು ಹಲವು ಪಟ್ಟು ಹೆಚ್ಚಿಸಿದೆ. ಜೊತೆಗೆ ಶ್ರೀಲಂಕಾದ ಹಂಬಂಟೋಟಾ, ಪಾಕಿಸ್ತಾನದ ಗ್ವಾದರ್ ಬಂದರಿನ ಮೇಲೆ ಹತೋಟಿ ಸಾಧಿಸಲು ಅದಕ್ಕೆ ಸಾಧ್ಯವಾಗಿದೆ.
ಬಿಆರ್ಐ ಹೊರತಾಗಿ, ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಇಬ್ಬರು ಪ್ರಮುಖ ಸಂಸತ್ ಸದಸ್ಯರು ಮೇ ತಿಂಗಳಲ್ಲಿ ತೈವಾನ್ ಅಧ್ಯಕ್ಷರ ವರ್ಚುವಲ್ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜೂನ್ ತಿಂಗಳಲ್ಲಿ ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿಯವರನ್ನು ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಆಗ ನಡೆದ ದೂರವಾಣಿ ಸಂಭಾಷಣೆ ವೇಳೆ ಭಾರತ-ಚೀನಾ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದರು. ಅದೇ ತಿಂಗಳು ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರೊಂದಿಗೆ ವರ್ಚುವಲ್ ಶೃಂಗಸಭೆ ನಡೆಸಿದ್ದರು.
ಕೊರೊನಾ ಸೋಂಕು ಹರಡಲು ಚೀನಾ ಕಾರಣ ಎಂದು ಆಸ್ಟ್ರೇಲಿಯಾ ಆರೋಪಿಸಿತ್ತು. ಹೀಗಾಗಿ ಆ ಎರಡೂ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಭಾರತ ನಿಧಾನವಾಗಿ ಆದರೆ ದೃಢವಾಗಿ ಯುಎಸ್ಎ ಕಡೆಗೆ ವಾಲುತ್ತಿದೆ ಎಂಬುದು ಚೀನಾ ಭಾವನೆ.
ಚೀನಾ ತನ್ನ ಆರ್ಥಿಕ ಶಕ್ತಿ ಪ್ರದರ್ಶಿಸಿದ ಬಳಿಕ ಈಗ ಸೇನಾ ಸಾಮರ್ಥ್ಯ ತೋರಿಸಲು ಬಯಸಿದೆ. ಆದ್ದರಿಂದ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುವುದರ ಜೊತೆಗೆ, ತೈವಾನ್, ವಿಯೆಟ್ನಾಂ ಮತ್ತು ಜಪಾನ್‌ಗೆ ಬೆದರಿಕೆ ಹಾಕಿತು. ಅಷ್ಟೇ ಅಲ್ಲದೆ ಅದು ಭಾರತೀಯ ಪ್ರದೇಶಗಳಿಗೆ ಲಗ್ಗೆ ಇಟ್ಟಿತು. ಭಾರತವನ್ನು ಅವಮಾನಿಸುವ ಉದ್ದೇಶದಿಂದ ಕೆಲವು ಪ್ರದೇಶಗಳನ್ನು ತನ್ನದಾಗಿಸಿಕೊಂಡಿತು.
ಪಿಎಲ್ಎ (ಪೀಪಲ್ಸ್ ಲಿಬರೇಷನ್ ಆರ್ಮಿ ಆಫ್ ಚೀನಾ) ಪಡೆಗಳು ಗಾಲ್ವಾನ್ ಕಣಿವೆಯನ್ನು ಆಕ್ರಮಿಸಿದವು. ಆಗ ಕಮಾಂಡರ್ ಮಟ್ಟದ ವಿವಿಧ ಮಾತುಕತೆಗಳು ಮತ್ತು ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ತಮ್ಮ ಸಹವರ್ತಿಯೊಂದಿಗೆ ನಡೆಸಿದ ಚರ್ಚೆ ವೇಳೆ ಎರಡೂ ದೇಶಗಳ ಪಡೆಗಳು ತಮ್ಮ ಸ್ವಸ್ಥಾನಗಳಿಗೆ ಮರಳಬೇಕು ಎಂದು ನಿರ್ಧರಿಸಲಾಯಿತು. ಚೀನೀಯರು ಕೆಲವು ಪ್ರದೇಶಗಳಿಂದ ಕಾಲ್ತೆಗೆದರು. ಆದರೆ ಪೂರ್ಣ ನಿಷ್ಕ್ರಿಯವಾಗದೆ ಭಾರತೀಯ ಸೇನೆ ಗಸ್ತು ತಿರುಗುತ್ತಿದ್ದ ಕೆಲವು ಪ್ರದೇಶದ ಮೇಲೆ ಚೀನಾ ನಿಯಂತ್ರಣ ಸಾಧಿಸಿತ್ತು.
ಈ ಮಧ್ಯೆ ಭಾರತವನ್ನು ಪದೇಪದೇ ದ್ವೇಷಿಸುವುದನ್ನೇ ಬಯಸುವ ಮತ್ತು ಚೀನಾದಿಂದ ಹಲವು ಉಪಕಾರಗಳನ್ನು ಪಡೆದ ಪಾಕಿಸ್ತಾನ ಕೂಡ ಗಡಿಭಾಗದಲ್ಲಿ ಉದ್ವಿಗ್ನತೆ ಸೃಷ್ಟಿಮಾಡಿತು. ಪಾಕಿಸ್ತಾನದ ಪಡೆಗಳು ಹಲವಾರು ಸ್ಥಳಗಳಲ್ಲಿ ಶೆಲ್ ದಾಳಿ ನಡೆಸುವುದಲ್ಲದೆ ಭಾರೀ ಶಸ್ತ್ರಾಸ್ತ್ರಗಳನ್ನು ಸಹ ಬಳಸಿದವು. ಜೂನ್ 2020ರಲ್ಲಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್ಎಫ್) ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿತು, ಅದು ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುತ್ತಿತ್ತು.
ವರದಿಗಳ ಪ್ರಕಾರ ಜೂನ್‌ನಲ್ಲಿ ಸುಮಾರು 150 ಬಾರಿ ಕದನ ವಿರಾಮ ಉಲ್ಲಂಘನೆ ಆಗಿತ್ತು. ಭಾರೀ ಗುಂಡಿನ ದಾಳಿ ಮಾಡುತ್ತಲೇ ಪಾಕಿಸ್ತಾನ ಭಯೋತ್ಪಾದಕರನ್ನು ಒಳನುಸುಳಿಸಲು ಹಲವು ಯತ್ನಗಳನ್ನು ಮಾಡಿತು.
ಇದೆಲ್ಲದರ ನಡುವೆ 2020ರ ಆಗಸ್ಟ್ 4ರಂದು ಪ್ರಧಾನಿ ಇಮ್ರಾನ್ ಖಾನ್ ಅವರು ಹೊಸ ರಾಜಕೀಯ ಭೂಪಟವೊಂದನ್ನು ಬಿಡುಗಡೆ ಮಾಡಿದರು. ಅದರಲ್ಲಿ ಜಮ್ಮು ಮತ್ತು ಕಾಶ್ಮೀರ ಇಡಿಯಾಗಿ ಹಾಗೂ ಗುಜರಾತಿನ ಜುನಾಗಡ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಬಿಂಬಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ತೆಗೆದುಹಾಕಿದ ವರ್ಷಾಚರಣೆಗೆ ಒಂದು ದಿನ ಮೊದಲು ಇಮ್ರಾನ್ ಖಾನ್ ಈ ಭೂಪಟ ಬಿಡುಗಡೆ ಮಾಡಿದ್ದರು.
370ನೇ ವಿಧಿಯ ರದ್ದತಿಯಿಂದಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪರಿಪಾಠ ಕೈತಪ್ಪಿತು. ಜೊತೆಗೆ ರಾಜ್ಯವನ್ನು ಲಡಾಖ್ ಮತ್ತು ಜಮ್ಮು ಕಾಶ್ಮೀರ ವಲಯ ಎಂದು ಪರಿಗಣಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಎರಡೂ ಪ್ರದೇಶಗಳು ಈಗ ನೇರವಾಗಿ ಕೇಂದ್ರಾಡಳಿತದ ವ್ಯಾಪ್ತಿಗೆ ಬರುತ್ತವೆ.
370ನೇ ವಿಧಿಯನ್ನು ರದ್ದುಪಡಿಸಿದಾಗ ಭಾರತದ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಡಳಿತಾರೂಢ ಸರ್ಕಾರ ತೀವ್ರ ಟೀಕೆಗೆ ಒಳಗಾಗಿತ್ತು. ಪಾಕಿಸ್ತಾನದ ಜನರನ್ನು ತೃಪ್ತಿಪಡಿಸಲು ಇಮ್ರಾನ್ ಸರ್ಕಾರ ಈಗ ಈ ನಕ್ಷೆಯನ್ನು ಬಿಡುಗಡೆ ಮಾಡಿದೆ. 370ನೇ ವಿಧಿಯನ್ನು ಹಿಂಪಡೆದ ಭಾರತದ ಕ್ರಮಕ್ಕೆ ಪ್ರಸ್ತುತ ರಾಜಕೀಯ ಭೂಪಟ ತಕ್ಕ ಪ್ರತಿಕ್ರಿಯೆಯಾಗಿದೆ ಎಂದು ಇಸ್ಲಾಮಾಬಾದ್ ಬಿಂಬಿಸಿದೆ.
ಸಚಿವ ಸಂಪುಟ ಅನುಮೋದಿಸಿದ ಹೊಸ ನಕ್ಷೆಯು ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಇಮ್ರಾನ್ ಖಾನ್ ಉಲ್ಲೇಖಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಕೂಡ ಹೊಸ ನಕ್ಷೆಯ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದನ್ನು ‘ಅಭೂತಪೂರ್ವ ಹೆಜ್ಜೆ‘ ಎಂದು ಬಣ್ಣಿಸಿದ್ದಾರೆ. ಶಕ್ತಿಶಾಲಿ ಪದಗಳಿಂದ ಕೂಡಿದ ಸಣ್ಣ ಪತ್ರಿಕಾ ಪ್ರಕಟಣೆಯಲ್ಲಿ ದೇಶದ ವಿದೇಶಾಂಗ ಸಚಿವಾಲಯ " ಇದು ರಾಜಕೀಯ ಅಸಂಬದ್ಧತೆಯಿಂದ ಕೂಡಿದ ಕ್ರಮ. ಭಾರತದ ಗುಜರಾತ್ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಒಪ್ಪಲು ಸಾಧ್ಯವಾಗದ ರೀತಿಯ ಹಕ್ಕುಗಳನ್ನು ನೀಡಲಾಗಿದೆ. ಈ ಹಾಸ್ಯಾಸ್ಪದ ಪ್ರತಿಪಾದನೆಗಳಿಗೆ ಕಾನೂನಿನ ಮಾನ್ಯತೆಯೂ ಇಲ್ಲ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯೂ ಇಲ್ಲ” ಎಂದು ಭಾರತ ಪ್ರತ್ಯುತ್ತರ ನೀಡಿದೆ.
ಆಗಸ್ಟ್ 5ರ ಈಚೆಗೆ ಕಾಶ್ಮೀರದಲ್ಲಿ ಕೆಲವು ಪ್ರಮುಖ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನ ಬಯಸಿತು. ಆದರೆ ಭಾರತೀಯ ಭದ್ರತಾ ಪಡೆಗಳು ‘ಆಲ್ ಔಟ್’ ಮತ್ತು ‘ಕಾರ್ಡನ್ ಅಂಡ್ ಸರ್ಚ್’ ಕಾರ್ಯಾಚರಣೆ ಮೂಲಕ ಜೈಶ್ – ಎ- ಮೊಹಮ್ಮದ್, ಲಷ್ಕರ್ -ಎ-ತೊಯ್ಬಾ, ಅನ್ಸಾರ್ ಘಜ್ವಾತುಲ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಉನ್ನತ ಕಮಾಂಡರ್ಗಳೂ ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರನ್ನು ನಿರ್ನಾಮ ಮಾಡಿದ ಪರಿಣಾಮ ಆ ಯತ್ನ ಫಲ ಕಾಣಲಿಲ್ಲ.
ಐಎಸ್ಐ ತರಬೇತಿ ಪಡೆದ ಸುಮಾರು 300 ಭಯೋತ್ಪಾದಕರು ಒಳನುಸುಳಲು ಭಾರತ ಪಾಕಿಸ್ತಾನ ಗಡಿಯಲ್ಲಿ ಸನ್ನದ್ಧರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ, ಆದರೆ ಭಾರತೀಯ ಭದ್ರತಾ ಪಡೆಗಳ ಹದ್ದಿನ ಕಣ್ಣಿನಿಂದಾಗಿ ಅವರು ಒಳನುಸುಳಲು ಸಾಧ್ಯವಾಗುತ್ತಿಲ್ಲ.
ಭಾರತ ಮತ್ತು ಚೀನಾದ ಎರಡೂ ಪಡೆಗಳು ಗಡಿಯಲ್ಲಿ ಮುಖಾಮುಖಿಯಾಗುವ ಯತ್ನದಲ್ಲಿರುವಾಗಲೇ ಪಾಕಿಸ್ತಾನ ಭಾರತಕ್ಕೆ ವ್ಯತಿರಿಕ್ತವಾಗುವಂತಹ ನಕ್ಷೆ ಬಿಡುಗಡೆ ಮಾಡಿದೆ. ಆ ಮೂಲಕ ಚೀನಾವನ್ನು ಸಂತೈಸಲು ಹೊರಟಿದೆ. ಜುಲೈ 15/16ರಂದು ಚೀನಾ ಮತ್ತು ಭಾರತ ಪರಸ್ಪರ ಸೆಣೆಸಿದ್ದು, ಈ ಸಂಘರ್ಷದಲ್ಲಿ ಕರ್ನಲ್ ಸೇರಿದಂತೆ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.
ಚೀನಾ ಅಂಕಿ - ಅಂಶಗಳನ್ನು ಬಹಿರಂಗಪಡಿಸದೇ ಇದ್ದರೂ ಪ್ರಮುಖ ಮೂಲಗಳ ಪ್ರಕಾರ ಪಿಎಲ್ಎ ತನ್ನ ಒಬ್ಬ ಅಧಿಕಾರಿ ಸೇರಿದಂತೆ 40ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿತು.
ಹಿಮಾಲಯ ನಾಡಿನಲ್ಲಿ ಚೀನಾದ ಅಣತಿಯ ಮೇರೆಗೆ ಪಾಕಿಸ್ತಾನ ನೇಪಾಳವನ್ನೇ ಅನುಕರಿಸಿ ನಕ್ಷೆ ಬಿಡುಗಡೆ ಮಾಡಿದೆ. ಆ ನಕ್ಷೆಯಲ್ಲಿ ಭಾರತದ ಪ್ರಾಂತ್ಯಗಳಾದ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿಯನ್ನು ನೇಪಾಳದ ಭಾಗವಾಗಿ ಬಿಂಬಿಸಲಾಗಿತ್ತು. ಶಾಕ್ಸಂ ಕಣಿವೆ ಮತ್ತು ಅಕ್ಸಾಯ್ ಚಿನ್ ಪ್ರಾಂತ್ಯಗಳನ್ನು ಈಗಾಗಲೇ ಚೀನಾ ಅತಿಕ್ರಮಿಸಿರುವುದರಿಂದ ಆ ಪ್ರದೇಶಗಳನ್ನು ಪಾಕಿಸ್ತಾನ ತನ್ನ ನಕ್ಷೆಯಲ್ಲಿ ಬಿಂಬಿಸಿಲ್ಲ.
ಏನೇ ಆದರೂ, ಇಸ್ಲಾಮಾಬಾದ್ ತಾನು ಆರ್ಥಿಕ ಬಿಕ್ಕಟ್ಟಿನಲ್ಲಿ ಇರುವುದನ್ನು ಹಾಗೂ ಸೌದಿ ಅರೇಬಿಯಾ, ಯುಎಇ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಚೀನಾ ದೇಶಗಳು ನೀಡಿದ ಸಾಲ ಮತ್ತು ಧನಸಹಾಯದ ಆಧಾರದಲ್ಲಿ ಉಳಿದುಕೊಂಡಿರುವುದನ್ನು ಅರಿತುಕೊಳ್ಳಬೇಕು. ಪಾಕಿಸ್ತಾನ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ( ಎಫ್ಎಟಿಎಫ್)ನ ‘ಬೂದು ಪಟ್ಟಿಯಲ್ಲಿ’ ಇರುವುದರಿಂದ ಐಎಂಎಫ್ ಮಂಜೂರು ಮಾಡಿದ ಸಾಲ ತೀರಿಸಲೇ ಬೇಕಾದ ಸಂಕಷ್ಟದಲ್ಲಿದೆ. ಜೊತೆಗೆ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವುದು ಮತ್ತು ಸಹಾಯ ಮಾಡುವುದನ್ನು ನಿಲ್ಲಿಸದೆ ಇದ್ದಲ್ಲಿ ಪಾಕಿಸ್ತಾನವನ್ನು ‘ಕಪ್ಪು-ಪಟ್ಟಿಗೆ’ ಸೇರಿಸುವಂತೆ ಐಎಂಎಫ್ ಶಿಫಾರಸು ಮಾಡುವ ಸಾಧ್ಯತೆಗಳೂ ಇವೆ.
ಚೀನಾ ವಿಸ್ತರಣಾವಾದಿ ದೇಶವಾಗಿದ್ದು, ಸಾಲವನ್ನು ಮರುಪಾವತಿಸುವಲ್ಲಿ ಪಾಕಿಸ್ತಾನ ವಿಫಲವಾದರೆ, ಗ್ವಾದರ್ ಬಂದರು, ಬಲೂಚಿಸ್ತಾನದ ಖನಿಜ ಸಂಪನ್ಮೂಲಗಳು ಮಾತ್ರವಲ್ಲದೆ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನದ ಕೃಷಿಯೋಗ್ಯ ಭೂಮಿ ಸೇರಿದಂತೆ ಪಾಕಿಸ್ತಾನದ ಸ್ಥಿರ ಆಸ್ತಿಗಳ ಮೇಲೆ ಚೀನಾ ಕಣ್ಣು ಹಾಕಬಹುದು.
ಭಾರತಕ್ಕೆ ಬೆದರಿಕೆ ಒಡ್ಡುವಂತಹ ಚೀನಾ ಪ್ರಯತ್ನಗಳು ವಿಫಲವಾಗಿವೆ. ಏಪ್ರಿಲ್ 2020ಕ್ಕಿಂತ ಮೊದಲಿದ್ದ ಸ್ಥಿತಿಗೆ ಬೀಜಿಂಗ್ ಮರಳಬೇಕು ಎಂದು ನವದೆಹಲಿ ಸ್ಪಷ್ಟವಾಗಿ ಹೇಳಿದೆ. ಭಾರತ ತನ್ನ ಸೇನೆಯನ್ನು ನಿಯೋಜಿಸಿರುವುದು ಮಾತ್ರವಲ್ಲ, ವಾಯುಪಡೆಯ ವಿಮಾನಗಳನ್ನು ಸಹ ಮುಂಚೂಣಿ ಪ್ರದೇಶಗಳಲ್ಲಿ ಇರಿಸಿತ್ತು. ಭಾರತದ ಕೋರಿಕೆಯ ಮೇರೆಗೆ ನಿಗದಿತ ಗಡುವಿಗಿಂತಲೂ ಮೊದಲೇ ಫ್ರಾನ್ಸ್ 5 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ತಲುಪಿಸಿತು. ಯುಎಸ್ಎ, ವಿಯೆಟ್ನಾಂ, ಜಪಾನ್, ಆಸ್ಟ್ರೇಲಿಯಾ, ಯುಕೆ ಮತ್ತು ತೈವಾನ್ ಸೇರಿದಂತೆ ಹಲವಾರು ದೇಶಗಳು ಭಾರತಕ್ಕೆ ತಮ್ಮ ಬೆಂಬಲದ ಹಸ್ತ ಚಾಚಿದವು. ಆದ್ದರಿಂದ ಸಂಪೂರ್ಣ ಹಿಂತೆಗೆತಕ್ಕೆ ಇನ್ನಷ್ಟು ಸಮಯ ಹಿಡಿದರೂ ಸಹ ಚೀನಾ ಇದನ್ನೆಲ್ಲಾ ಗಮನಿಸುವ ಅವಶ್ಯಕತೆ ಇದೆ.
ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ದೇಶದಲ್ಲಿ ತೀವ್ರ ಭಿನ್ನಾಭಿಪ್ರಾಯ ಏಳುತ್ತಿದ್ದು ದಿನದಿಂದ ದಿನಕ್ಕೆ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಲು ಅವರು ಭಾರತದ ಮೇಲೆ ದಾಳಿ ಮಾಡಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಆರಂಭದಲ್ಲಿ ಚೀನಾ ಭಾರತವನ್ನು ವಶಪಡಿಸಿಕೊಳ್ಳುತ್ತದೆ ಮತ್ತು ತಮಗೆ ದೇಶಿಯ ಬೆಂಬಲ ದೊರೆಯುತ್ತದೆ ಎಂದು ಇಮ್ರಾನ್ ಖಾನ್ ಭಾವಿಸಿದ್ದರು. ಆದರೆ ಭಾರತ ಇಂತಹ ಕಠಿಣ ಪ್ರತಿಕ್ರಿಯೆಗಳನ್ನು ನೀಡುತ್ತದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಪಡೆಯುತ್ತದೆ ಎಂದು ಚೀನಾ ಅಥವಾ ಪಾಕಿಸ್ತಾನ ನಿರೀಕ್ಷಿಸಿರಲಿಲ್ಲ. ಚೀನಾ ಸಂಪೂರ್ಣವಾಗಿ ಯುದ್ಧಕ್ಕೆ ಇಳಿಯದು ಜೊತೆಗೆ ಚೀನಾ ಹಾಗೂ ಭಾರತ ಎರಡೂ ತಮ್ಮ ಪಡೆಗಳನ್ನು ಹಿಂತೆಗೆದುಕೊಳ್ಳುತ್ತವೆ ಎಂಬುದು ಈಗ ಹೆಚ್ಚು ಕಡಿಮೆ ಖಚಿತವಾಗಿದೆ.
370ನೇ ವಿಧಿ ರದ್ದುಪಡಿಸಿದಾಗ ಪಾಕಿಸ್ತಾನ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡಿಸಲು ವಿಫಲವಾಯಿತು. ಹೀಗಾಗಿ ಇಸ್ಲಾಮಾಬಾದ್ ದೇಶದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ನಿಯಂತ್ರಿಸಲು ಯತ್ನಿಸಬೇಕಿದೆ. ಅಲ್ಲದೆ ಭಾರತ ಮತ್ತು ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದನ್ನು ಕೂಡ ಅದು ನಿಲ್ಲಿಸಬೇಕಿದೆ.
ಬಲೂಚಿಸ್ತಾನದಲ್ಲಿ ಹಲವಾರು ಪ್ರತ್ಯೇಕತಾವಾದಿ ಸಂಘಟನೆಗಳು ಇವೆ. ಜೊತೆಗೆ ಇತ್ತೀಚೆಗೆ ಬಲೂಚ್ ಮತ್ತು ಸಿಂಧಿ ರಾಷ್ಟ್ರೀಯವಾದಿಗಳು ಕೈಜೋಡಿಸಿದ್ದಾರೆ. ಆದ್ದರಿಂದ ಭಾರತಕ್ಕೆ ವಿರುದ್ಧವಾಗಿ ಚೀನಾವನ್ನು ಬೆಂಬಲಿಸುವ ಮೊದಲು, ಪಾಕಿಸ್ತಾನ ತನ್ನ ಆರ್ಥಿಕ ಮತ್ತು ಕಾನೂನು ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯ ಇದೆ.
ವಿಶೇಷ ಬರಹ: ಜೈ ಕುಮಾರ್ ವರ್ಮಾ