ಶ್ರೀನಗರ (ಜಮ್ಮು ಕಾಶ್ಮೀರ): ಜಮ್ಮು ಕಾಶ್ಮಿರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ (ಡಿಡಿಸಿ)ಯಲ್ಲಿ ಮಾಜಿ ಉಗ್ರನ ಪತ್ನಿಯೊಬ್ಬರು ಸ್ಪರ್ಧಿಸುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ. ಡಿಸೆಂಬರ್ 7ರಂದು ನಡೆಯಲಿರುವ 3ನೇ ಹಂತದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಪಾಕಿಸ್ತಾನ ಮೂಲದ ಸೋಮಿಯಾ ಸದಫ್ ಎಂಬಾಕೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಮತನೀಡುವಂತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
2002ರಲ್ಲಿ ಕಾಶ್ಮೀರದ ಯುವಕ ಅಬ್ದುಲ್ ಮಜೀದ್ ಭಟ್ ಎಂಬಾತನನ್ನು ವಿವಾಹವಾಗಿದ್ದ ಇವರು, ಉಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಾಶ್ಮೀರ ಬಿಟ್ಟು ತೆರಳಿದ್ದವರಿಗೆ ಪುನರ್ವಸತಿ ನೀತಿಯಡಿ ಹಿಂದಿರುಗಲು ಅವಕಾಶ ಕಲ್ಪಿಸಿದಾಗ ಇಬ್ಬರು ಕಾಶ್ಮೀರ ಕಣಿವೆಗೆ ಆಗಮಿಸಿ ನೆಲೆಸಿದ್ದರು.
ಇನ್ನು ಸೋಮಿಯಾ ಪತಿ ಅಬ್ದುಲ್ ಮಜೀದ್ ಭಟ್ ಉಗ್ರರ ಜೊತೆ ನಂಟು ಹೊಂದಿದ್ದ, ಬಳಿಕ ಪೊಲೀಸರಿಗೆ ಶರಣಾಗಿ ಮುಖ್ಯವಾಹಿನಿಯಲ್ಲಿ ಬದುಕು ಸಾಗಿಸಲು ಮುಂದಾಗಿದ್ದ. ಈಗ ಅಬ್ದುಲ್ ಮಜೀದ್ ಪೌಲ್ಟ್ರಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಸೋಮಿಯಾ ಸದಫ್, 'ಈ ಬಾರಿಯ ಡಿಡಿಸಿ ಚುನಾವಣೆಯಲ್ಲಿ 11 ಮಹಿಳೆಯರು ಚುನಾವಣಾ ಕಣಕ್ಕೆ ಧುಮುಕಿದ್ದು ವಿಶೇಷವಾಗಿದೆ. ಇದಕ್ಕೂ ಮೊದಲು ಸರ್ಕಾರದ ಎಸ್ಆರ್ಎಲ್ಎಂ ಎಂಬ ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಜನರ ಸಮಸ್ಯೆಗಳ ಬಗ್ಗೆ ಅರಿತುಕೊಂಡಿದ್ದೆ. ಈ ವೇಳೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಇದು ಚುನಾವಣೆ ಸ್ಪರ್ಧಿಸಲು ಹೆಚ್ಚು ಅನುಕೂಲವಾಗಿದೆ' ಎಂದಿದ್ದಾರೆ.
'ಕಾಶ್ಮೀರ ಕಣಿವೆಯಲ್ಲಿ ನೆಲೆಸಿರುವ ಪಾಕಿಸ್ತಾನಿ ಮೂಲದ ಸಮುದಾಯ ನನ್ನ ಚುನಾವಣಾ ಸ್ಪರ್ಧೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಧ್ವನಿ ತಲುಪಿಸಲು ನಾನೊಂದು ಸಾಧನದಂತೆ ಕೆಲಸ ನಿರ್ವಹಿಸುವೆ' ಎಂದಿದ್ದಾರೆ.
'ನಾನು ಗಡಿಭಾಗದಿಂದ ಬಂದು ಕಾಶ್ಮೀರದ ಕಣಿವೆಯಲ್ಲಿ ನೆಲೆಸಿರುವ ಜನತೆಯ ಹಾಗೂ ಸ್ಥಳೀಯರ ಏಳಿಗೆಗಾಗಿ ಶ್ರಮಿಸಲಿದ್ದೇನೆ. ಅಲ್ಲದೆ ಮೌಲಾನಾ ಆಜಾದ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ, ನಾನು ಕಣಿವೆಯ ಎಲ್ಲಾ ಮಹಿಳೆಯರ ಪ್ರತಿನಿಧಿಯಾಗಿ ಚುನಾವಣೆ ಸ್ಪರ್ಧಿಸುತ್ತಿದ್ದೇನೆ' ಎಂದು ಅವರು ಹೇಳುತ್ತಾರೆ.