ಜೈಸಲ್ಮೇರ್( ರಾಜಸ್ಥಾನ): ದೇಶಾದ್ಯಂತ ಲಾಕ್ಡೌನ್ ಇರುವ ಕಾರಣ ವಲಸೆ ಕಾರ್ಮಿಕರು ಮತ್ತು ದೈನಂದಿನ ಕೂಲಿ ಮಾಡುವವರು ತುತ್ತು ಅನ್ನಕ್ಕಾಗಿ ಹೆಣಗಾಡುತ್ತಿದ್ದಾರೆ. ಇದೇ ರೀತಿ ರಾಜಸ್ಥಾನದ ಪಾಕಿಸ್ತಾನಿ ವಲಸೆ ಕುಟುಂಬಗಳು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿವೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇವರಿಗೆ ಅವಶ್ಯಕವಿರುವ ಆಹಾರ ಸಾಮಗ್ರಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು. ಆದ್ರೆ ಸರ್ಕಾರದಿಂದ ನೀಡುತ್ತಿರುವ ರೇಷನ್ ನಮಗೆ ಸಾಕಾಗುತ್ತಿಲ್ಲ ಎಂದು ಪಾಕಿಸ್ತಾನದ ವಲಸೆ ಕುಟುಂಬಗಳ ಆರೋಪವಾಗಿದೆ.
“ನಾವು ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದೇವೆ. ಲಾಕ್ಡೌನ್ ಬಳಿಕ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದ್ದೇವೆ. ನಮಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ. ನಾವು ಇತರ ನಾಗರಿಕರಂತೆ ಸಹಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ ಎಂದು ಜೈಸಲ್ಮೇರ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ವಲಸಿಗ ಶಂಕರ್ ಲಾಲ್ ಈಟಿವಿ ಭಾರತ್‌ಗೆ ತಿಳಿಸಿದರು.
ಪಾಕಿಸ್ತಾನದಿಂದ ಬಂದ ಸುಮಾರು 7,000 ಹಿಂದೂ ವಲಸೆ ಕುಟುಂಬಗಳು ರಾಜ್ಯದಲ್ಲಿ ವಾಸಿಸುತ್ತಿದ್ದು, ಜೈಪುರ, ಜೋಧ್‌ಪುರ, ಬಾರ್ಮರ್, ಪಾಲಿ, ಬಿಕಾನೆರ್, ಜೈಸಲ್ಮೇರ್, ಜಲೋರ್ ಮತ್ತು ಸಿರೋಹಿ ಜಿಲ್ಲೆಗಳು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಅವರು ಇದ್ದಾರೆ.