ಶ್ರೀನಗರ: ಜಮ್ಮು-ಕಾಶ್ಮೀರದ ನೌಗಮ್ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಸೇನೆ ಮೋಟರ್ ಶೆಲ್ ದಾಳಿ ನಡೆಸುವ ಮೂಲಕ ಮತ್ತೆ ಕದನವಿರಾಮ ಉಲ್ಲಂಘನೆ ಮಾಡಿದೆ ಎಂದು ಭಾರತೀಯ ಸೇನೆಯ ರಕ್ಷಣಾ ವಕ್ತಾರರು ಬುಧವಾರ ತಿಳಿಸಿದ್ಧಾರೆ.
ಜೂನ್.16 ರ ಸಂಜೆ ಪಾಕಿಸ್ತಾನ ಸೇನೆಯೂ ನೌಗಮ್ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಮೋಟರ್ ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್‌ಒಸಿ ಬಳಿ ಪಾಕಿಸ್ತಾನವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಕಳೆದ ಕೆಲವು ದಿನಗಳಿಂದ ಪಾಕಿಸ್ತಾನವು ಕಾಶ್ಮೀರದ ಉರಿ ಮತ್ತು ತಂಗ್ದಾರ್ ವಲಯಗಳಲ್ಲಿನ ಜಮ್ಮುವಿನ ರಾಜೌರಿ ಮತ್ತು ಪೂಂಚ್‌ನ ಪಿರ್ ಪಂಜಾಲ್‌ನ ದಕ್ಷಿಣದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಕಳೆದ ಎರಡು ವಾರಗಳಲ್ಲಿ ರಾಜೌರಿ ಮತ್ತು ಪೂಂಚ್ ಅವಳಿ ವಲಯಗಳಲ್ಲಿ ಪಾಕಿಸ್ತಾನದ ಗುಂಡಿನ ದಾಳಿಗೆ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.